ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ, 'ಗದ್ದಲ' ಸಭೆ
ಕನ್ನಡಪ್ರಭ ವಾರ್ತ್ಣೆ ಚಿಕ್ಕನಾಯಕನಹಳ್ಳಿ ಏ.16
ತಾಲೂಕಿನಲ್ಲಿ ಕಾರ್ಯಕರ್ತರ ಮತ್ತು ಹಾಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವವರ ಗಮನಕ್ಕೂ ತಾರದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಯನ್ನು ಬದಲಾಯಿಸಿರುವುದರ ವಿರುದ್ಧ ಮಂಗಳವಾರ ಕಾಂಗ್ರೆಸ್ ಸಭೆಯಲ್ಲಿ ಗದ್ದಲ ಮತ್ತು ತಳ್ಳಾಟವುಂಟಾಯಿತು.
ಈ ಹಿಂದೆ ವಿಧಾನಸಭಾ ಚುನಾವಣೆ ಪ್ರಯುಕ್ತ ನಡೆದ ಸಭೆಯಲ್ಲಿ, ಹೊರಗಿನವರಿಗೆ ಮತ್ತು ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದವರಿಗೆ ಟಿಕೆಟ್ ನೀಡುವುದು ಬೇಡ, ಪಕ್ಷದಲ್ಲಿ ಹಿಂದಿನಿಂದ ದುಡಿದವರಿಗೆ ಟಿಕೆಟ್ ನೀಡಿ ಎಂದು ಠರಾವು ಮಾಡಿ ಹೈಕಮಾಂಡಿಗೆ ಕಳುಹಿಸಲಾಗಿತ್ತು. ಆದರೆ ಈ ಠರಾವಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಕಾಂಗ್ರೆಸ್ ಸಾಸು ಯಾದವರ ಹಟ್ಟಿಯ ಎಸ್.ಎನ್.ಸತೀಶ್ ಎಂಬ ಯುವಕನಿಗೆ ಟಿಕೆಟ್ ನೀಡಿದೆ. ಈ ಸಂಬಂಧ ಮಂಗಳವಾರ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಸಭೆಯಲ್ಲಿ ಮೊದಲಿಗೆ ಬ್ಲಾಕ್ ಅಧ್ಯಕ್ಷರ ಬದಲಾವಣೆ ವಿಷಯ ಚರ್ಚೆಗೆ ಬಂದು ಗದ್ದಲ, ನೂಕಾಟ ಉಂಟಾಯಿತು.
ತಾತ್ಕಾಲಿಕ ಸಮಿತಿ: ಈ ಹಂತದಲ್ಲಿ ಎದ್ದು ನಿಂತ ಮಾಜಿ ಶಾಸಕ ಬಿ. ಲಕ್ಕಪ್ಪನವರು, ಹಾಲಿ ಇದ್ದ ಬ್ಲಾಕ್ ಅಧ್ಯಕ್ಷರು ಕಾರ್ಯಬಾಹುಳ್ಯ ವಿರುವ ವ್ಯಕ್ತಿ. ಆದ್ದರಿಂದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಸಾಧ್ಯವಿಲ್ಲದ ಕಾರಣದಿಂದ ಅವರ ಜವಾಬ್ದಾರಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಾತ್ಕಾಲಿಕ ಸಮಿತಿ ನೇಮಕ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಲು ಮುಂದಾದರು.
ಸ್ವಂತ ಹಣ ಖರ್ಚು ಮಾಡುವಾಗ ಸುಮ್ಮನಿದ್ರಿ: ಆಗ ಪುರಸಭಾ ಸದಸ್ಯ ಸಿ.ಪಿ. ಮಹೇಶ್, ಬಸವರಾಜುರವರು ಪಕ್ಷದ ಸಂಘಟನೆಗಾಗಿ ಲಕ್ಷ ಲಕ್ಷ ಸ್ವಂತ ಹಣ ಖರ್ಚು ಮಾಡುವಾಗ ಅವರಿಗೆ ಪುರುಷೊತ್ತಿಲ್ಲದಿದ್ದರು, ಬಾಯಿ ಮುಚ್ಚಿಕೊಂಡು ಸುಮ್ಮನಿದ್ದವರು. ಈಗ ಏಕಾಏಕಿ ಬದಲಾಯಿಸಿದ್ದೀರಿ. ಕಾಲಕಾಲಕ್ಕೆ ಪಕ್ಷದ ಸಭೆ ಕರೆದಿಲ್ಲ ಎಂದು ಹೈಕಮಾಂಡ್ಗೆ ದೂರು ನೀಡಿದವರು, ಅಂದು ಸಭೆ ಕರೆಯದಿದ್ದರು ಸುಮ್ಮನಿದ್ದಿರಿ. ಅದು ಹೋಗಲಿ ಹುಳಿಯಾರು ಬ್ಲಾಕ್ ಅಧ್ಯಕ್ಷರು ಸಹ ಒಂದು ಸಭೆ ಕರೆದಿಲ್ಲ, ಅವರನ್ನು ಏಕೆ ಬದಲಾಯಿಸಿಲ್ಲ ಎಂದು ಏರಿದ ದನಿಯಲ್ಲಿ ಮಾತನಾಡಿದರು.
ತಾಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷ ವಾಸು, ಇದು ಚುನಾವಣೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಸಮಿತಿ, ಚುನಾವಣೆ ಮುಗಿದ ತಕ್ಷಣ ಬರಕಾಸ್ತಾಗುತ್ತದೆ ಎಂದಾಗ ಅವರನ್ನು ಮೂಲೆಗೆ ತಳ್ಳಿ ಮಾತನಾಡದಂತೆ ಬಾಯಿ ಮುಚ್ಚಿಸಿದರು. ಒಟ್ಟಾರೆ ಅಲ್ಲಿ ಸೇರಿದ್ದ ಬಹುತೇಕ ಜನ ಸಿ.ಬಸವರಾಜುರವರು ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಕೂಗಾಡಿದರು.
ಈ ಗದ್ದಲದ ನಡುವೆಯೇ ಅಭ್ಯರ್ಥಿ ಎಸ್.ಎನ್. ಸತೀಶ್, ಪತ್ರಕರ್ತರೊಂದಿಗೆ ಮಾತನಾಡಿ ಸದ್ಯದ ಪರಿಸ್ಥಿಯಲ್ಲಿ ಬ್ಲಾಕ್ ಕಾಂಗ್ರೆಸ್ ವ್ಯವಸ್ಥೆ ಹೇಗಿದೆಯೋ ಹಾಗೆ ಮುಂದುವರಿಯುವುದು ಸೂಕ್ತ. ಆದ್ದರಿಂದ ಸಿ.ಬಸವರಾಜುರವರು ಅಧ್ಯಕ್ಷರಾಗಿ ಮುಂದುವರಿಕೆಗೆ ನನ್ನ ಸಹಮತವಿದೆ ಎಂದು ತಿಳಿಸಿದರು.
ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಶತ್ರು: ಪ್ರತಿ ಬಾರಿಯು ನಾಮಪತ್ರ ಸಲ್ಲಿಸುವ ಅಂತಿಮ ಕ್ಷಣದಲ್ಲಿ ಹೊಸ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡುವುದರಿಂದ 3 ಸಾವಿರ ಮತ ಗಳಿಕೆಯ ಮಟ್ಟಕ್ಕೆ ಬಂದಿದೆ. ಇದೇ 17 ನಾಮಪತ್ರ ಸಲ್ಲಿಕೆಗೆ ಕೊನೆ ದಿನ,ಅಭ್ಯರ್ಥಿಯಾದವರು ಕನಿಷ್ಠ ಪಕ್ಷ ಕ್ಷೇತ್ರದಲ್ಲಿರುವ ಹಳ್ಳಿಗಳ ಸುತ್ತುವುದಕ್ಕು ಸಹ ಕಾಲಾವಕಾಶವಿಲ್ಲದಂತಹ ಸ್ಥಿತಿಯನ್ನು ಕಾಂಗ್ರೆಸ್ ನಿರ್ಮಾಣ ಮಾಡಿದೆ.
ಎಚ್.ಬಿ.ಎಸ್. ನಾರಾಯಣಗೌಡ, ಸೀಮೆಎಣ್ಣೆ ಕೃಷ್ಣಯ್ಯ, ಸಿ.ಕೆ.ಘನಿಸಾಬ್, ಕರವೇ ಗುರುಮೂರ್ತಿ,ಕೆ.ಜಿ.ಕೃಷ್ಣೇಗೌಡ, ಎಸ್ಸಿ ಮುಖಂಡ ಪರಮೇಶ್, ಉದ್ರಿಲೋಕೇಶ್, ನಿಜಾನಂದಮೂರ್ತಿ ಇದ್ದರು.