'ಕೈ'ಗೆ ಗುಡ್ ಬೈ, ಆನೆ ಏರಿದ ಕ್ಯಾಪ್ಟನ್ ಸೋಮಶೇಖರ್
ಕ.ಪ್ರ.ವಾರ್ತೆ ಚಿಕ್ಕನಾಯಕನಹಳ್ಳಿ ಏ.16
ಕಳೆದ ಎರಡು ವರ್ಷಗಳಿಂದ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕ್ಯಾಪ್ಟನ್ ಸೋಮಶೇಖರ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ತಮಗೆ ಪಕ್ಷ ನೀಡಿದ್ದ ಪದಾಧಿಕಾರಿ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.
ಸರ್ಕಾರಕ್ಕೆ ಹೆಚ್ಚು ಆದಾಯ ತರುವ ಫಲಭರಿತ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಅವರು ಕಳೆದ ಎರಡು ವರ್ಷಗಳ ಹಿಂದೆ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ತಾಲೂಕಿನಲ್ಲಿ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸುವ ಇರಾದೆ ಹೊಂದಿದ್ದ ಅವರು, ಪಕ್ಷದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬೇಸತ್ತು ಪಕ್ಷಕ್ಕೆ ಮತ್ತು ಪದಾಧಿಕಾರಿ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಪಕ್ಷ ನನಗಿಂತ ಯಾರಾದರೂ ಮೇಲ್ಮಟ್ಟದ ಅಥವಾ ಪಕ್ಷಕ್ಕಾಗಿ ಹಿಂದಿನಿಂದ ದುಡಿದ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ನಾನು ಸಮರ್ಥಿಸಿಕೊಳ್ಳುತ್ತಿದ್ದೆ. ಆದರೆ ನಮಗಿಂತ ಕಡಿಮೆ ಅರ್ಹತೆಯುಳ್ಳ ವ್ಯಕ್ತಿಗೆ ನೀಡಿರುವುದು ನನಗೆ ಬೇಸರ ತಂದಿದೆ. ಆದ್ದರಿಂದ ಮನನೊಂದು ನಾನು ಪಕ್ಷಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎಂದರು.
ಆನೆಮೇಲೆ ಸವಾರಿ: ನಿಮ್ಮ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ ತಕ್ಷಣ ಪತ್ರಕರ್ತರ ಕೈಗೆ ಬಿಎಸ್ಪಿ ರಾಜ್ಯ ಪದಾಧಿಕಾರಿಯಾಗಿ ನೇಮಕವಾಗಿರುವ ಆದೇಶದ ಪ್ರತಿಯನ್ನು ನೀಡಿ ಇನ್ನು ಮುಂದೆ ನಾನು ರಾಜ್ಯ ಮಟ್ಟದಲ್ಲಿ ಪ್ರವಾಸ ಮಾಡಿ ಬಿಎಸ್ಪಿ ಪಕ್ಷವನ್ನು ಸಂಘಟಿಸುತ್ತೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿ.ನಾ.ಹಳ್ಳಿ ಕ್ಷೇತ್ರದಿಂದ ಬಿಎಸ್ಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದರು.