ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜನಜಾತ್ರೆ ಮಧ್ಯೆ ಕೃಷ್ಣಪ್ಪ, ಮಸಾಲೆ ಜಯರಾಂ ನಾಮಪತ್ರ

Vishwanath S
Updated On : 15 Apr 2013, 11:02 am

ಕ.ಪ್ರ.ವಾರ್ತೆ  , ತುರುವೇಕೆರೆ  , ಏ.15
ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ಸೋಮವಾರ ಹಾಲಿ ಶಾಸಕ ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ ಹಾಗೂ ಕೆಜೆಪಿಯ ಮಸಾಲಾ ಜಯರಾಂ ಜನಸಾಗರದ ಮಧ್ಯೆ ಬಂದು ತಮ್ಮ ನಾಮಪತ್ರ ಸಲ್ಲಿಸಿದರು.
 ಶಾಸಕ ಎಂ.ಟಿ.ಕೃಷ್ಣಪ್ಪನವರು ನಾಮಪತ್ರ ಸಲ್ಲಿಸುವ ಸಲುವಾಗಿ ತಮ್ಮ ಮನೆಯಿಂದಲೇ ಸಾವಿರಾರು ಕಾರ್ಯಕರ್ತರೊಂದಿಗೆ ತೆರೆದ ವಾಹನದಲ್ಲಿ ಹೊರಟರು. ಶಾಸಕರು ದಾರಿಯುದ್ದಕ್ಕೂ ಮತದಾರರಿಗೆ ನಮಸ್ಕರಿಸುತ್ತಾ ಸಾಗಿ ಬಂದರು.
ತಲೆಗೆ ಹಸಿರು ರುಮಾಲು ಧರಿಸಿದ್ದ  ಎಂ.ಟಿ.ಕೃಷ್ಣಪ್ಪನವರಿಗೆ ತಾಲೂಕು ಪಂಚಾಯ್ತಿಯ ಹಾಲಿ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ, ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಮಾಜಿ ಅಧ್ಯಕ್ಷ ಶಂಕರೇಗೌಡ, ತಾಲೂಕು ಪಂಚಾಯ್ತಿ ಸದಸ್ಯ ಕೋಳಾಲ ಗಂಗಾಧರ್, ತಾಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ ಹಾಗೂ ಹಲವಾರು ಜನಪ್ರತಿನಿಧಿಗಳು ಸಾಥ್ ನೀಡಿದರು.
ಜೆಡಿಎಸ್ ಕಾರ್ಯಕರ್ತರು ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ದೇವೇಗೌಡ ಹಾಗೂ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಜಯಕಾರ ಹಾಕುತ್ತಾ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕೆಜೆಪಿ ಮೆರವಣಿಗೆ: ಕೆಜೆಪಿಯ ಅಭ್ಯರ್ಥಿ ಮಸಾಲಾ ಜಯರಾಂ ಅವರೂ ತಮಗೂ ಬೆಂಬಲಿಗರು ಕಡಿಮೆ ಇಲ್ಲವೆಂಬಂತೆ ಸಾವಿರಾರು ಕಾರ್ಯಕರ್ತರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಕೆಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಲಕ್ಷ್ಮೀನಾರಾಯಣ್, ಮುಖಂಡರಾದ ಎಂ.ಡಿ.ಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಕೆಂಪೇಗೌಡ, ತಾಲೂಕು ಅಧ್ಯಕ್ಷ ಮಾಚೇನಹಳ್ಳಿ ರಾಮಣ್ಣ, ಮುಸ್ಲಿಂ ಮುಖಂಡ ಹಾಗೂ ಪ.ಪಂ.ಸದಸ್ಯ ನದೀಂ ಅವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಂ.ಡಿ.ಲಕ್ಷ್ಮೀನಾರಾಯಣ್ ಹಾಗೂ ಕೆಜೆಪಿ ಅಭ್ಯರ್ಥಿ ಮಸಾಲಾ ಜಯರಾಂ ಅವರ ಪರ ಘೋಷಣೆ ಮೊಳಗಿಸಿದರು.
ಎಂ.ಡಿ.ಲಕ್ಷ್ಮೀನಾರಾಯಣ್ ಅವರ ಸ್ವಗ್ರಾಮ ಮುನಿಯೂರಿನಿಂದ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.  ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement