ಹಣಕ್ಕಾಗಿ ರಾಜಕೀಯ ಮಾಡುವನಲ್ಲ: ಸೋಮ್ಲಾ ನಾಯಕ್
ಕ.ಪ್ರ.ವಾರ್ತೆ , ಪಾವಗಡ , ಏ,15
ಹಣಕ್ಕಾಗಿ ರಾಜಕೀಯ ಮಾಡುವ ಜಾಯಮಾನ ನನ್ನದಲ್ಲ. ನನ್ನ ವಿರುದ್ಧ ಜೆಡಿಎಸ್ ಮಾಡುತ್ತಿರುವ ಅಪಪ್ರಚಾರ ಕುತಂತ್ರದಿಂದ ಕೂಡಿದೆ ಎಂದು ಮಾಜಿ ಶಾಸಕ ಸೋಮ್ಲಾನಾಯಕ್ ಕಿಡಿಕಾರಿದರು.
ಅವರು ಸೋಮವಾರ ಪಟ್ಟಣದ ಎಸ್ಎಸ್ಕೆ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಸಾವಿರಾರು ಮಂದಿ ಬೆಂಬಲಿಗರೊಂದಿಗೆ ಕಾಂಗ್ರೆಸ್ಗೆ ಅಧಿಕೃತವಾಗಿ ಸೇರ್ಪಡೆಯಾಗಿ ಮಾತನಾಡುತ್ತಿದ್ದರು. ಕಳೆದ 15ವರ್ಷಗಳ ಹಿಂದೆ ಜನತಾ ಪರಿವಾರದಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ಈಗ ತಾ.ಜೆಡಿಎಸ್ ಅಧ್ಯಕ್ಷರಾದ ಎನ್.ತಿಮ್ಮಾರೆಡ್ಡಿ ಅವರು ನನ್ನ ಪ್ರಮಾಣಿಕತೆ ಹತ್ತಿರದಿಂದ ನೋಡಿದವರು. ಈಗ ತಿಮ್ಮಾರೆಡ್ಡಿ ಹಾಗೂ ಪುತ್ರ ಗುತ್ತಿಗೆದಾರನೊಬ್ಬ ಶಾಸಕ ವೆಂಕಟರಮಣಪ್ಪ ಅವರಿಂದ 2ಕೋಟಿ ಹಣ ಪಡೆದು ನಾನು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆಂದು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಚ್ಚರಿಕೆ: ತಿಮ್ಮಾರೆಡ್ಡಿಯವರನ್ನು ಇದುವರೆಗೂ ಪೂಜ್ಯರೆಂದೇ ಕರೆಯುವ ನಾನು, ಅಪ್ಪ ಮಕ್ಕಳು ಇದೇ ರೀತಿ ಅಪ ಪ್ರಚಾರ ಮಾಡಿದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷರ ಕಾರ್ಯ ವೈಖರಿಯಿಂದ ಬೇಸತ್ತು ತಾವು ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಿರುವುದಾಗಿ ಅವರು ತಿಳಿಸಿದರು.
ಶಾಸಕ ವೆಂಕಟರಮಣಪ್ಪ ಮಾತನಾಡಿ ನಾನು ಮತ್ತು ಸೋಮ್ಲಾ ನಾಯಕ್ ಕಳೆದ 25ವರ್ಷಗಳಿಂದ ರಾಜಕೀಯವಾಗಿ ವೈರಿಗಳಾಗಿದ್ದರೂ ಅಣ್ಣ ತಮ್ಮಂದಿರಾಗಿಯೆ ಕೆಲಸ ಮಾಡಿದ್ದೇವೆ ಎಂದರು.
ನರಸಿಂಹಯ್ಯ, ಪಿ.ಎಚ್. ಸುಬ್ಬರಾಯಪ್ಪ, ಅಂಜನರೆಡ್ಡಿ, ಮಾನಂ ವೆಂಕಟಸ್ವಾಮಿ, ಚನ್ನಮಲ್ಲಯ್ಯ, ತಾ.ಅಧ್ಯಕ್ಷ ಸುದೇಶ್ಬಾಬು, ಸೊಗಡು ವೆಂಕಟೇಶ್, ಮುಂತಾದವರಿದ್ದರು.