ಕಾಂಗ್ರೆಸ್ ಅಭ್ಯರ್ಥಿ ಷಡಕ್ಷರಿ ನಾಮಪತ್ರ ಸಲ್ಲಿಕೆ
ಕ.ಪ್ರ. ವಾರ್ತೆ ತಿಪಟೂರು ಏ.17
ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆ.ಷಡಕ್ಷರಿ ಬುಧವಾರ ತಮ್ಮ ಮನೆ ದೇವರಾದ ನಗರದ ಶ್ರೀ ಕಲ್ಲೇಶ್ವರ ಸ್ವಾಮಿ ಮತ್ತು ಗ್ರಾಮದೇವತೆ ಶ್ರೀ ಕೆಂಪಮ್ಮದೇವಿಗೆ ಪೂಜೆ ಸಲ್ಲಿಸಿ ಸಾವಿರಾರು ಬೆಂಬಲಿಗರೊಂದಿಗೆ ಕೋಡಿ ಸರ್ಕಲ್ನಿಂದ ತಾಲೂಕು ಕಚೇರಿವರೆಗೂ ರೋಡ್ ಶೋ ನಡೆಸುವುದರೊಂದಿಗೆ ನಾಮ ಪತ್ರ ಸಲ್ಲಿಸಿದರು.
ಮಧ್ಯಾಹ್ನ 12ಗಂಟೆ ವೇಳೆಗೆ ಸುಮಾರು 8 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದ ವಿವಿಧ ಭಾಗಗಳಿಂದ ಅಭಿಮಾನಿಗಳು ನಗರದ ಶ್ರೀ ಕೆಂಪಮ್ಮದೇವಿ ದೇವಸ್ಥಾನ ಬಳಿ ಜಮಾಯಿಸಿದ್ದರು. ನಂತರ ನಗರದ ಮುಖ್ಯ ರಸ್ತೆಯಾಗಿರುವ ಬಿ.ಹೆಚ್. ರಸ್ತೆಯಲ್ಲಿ ರೋಡ್ ಶೋ ಪ್ರಾರಂಭವಾಗಿ ಕಾರ್ಯಕರ್ತರು ಶಿಳ್ಳೆ, ಘೋಷಣೆ, ಜೈಕಾರ,ಚಪ್ಪಾಳೆಯೊಂದಿಗೆ ವಿಜೃಂಭಿಸಿದರು. ಷಡಕ್ಷರಿಯವರು ನಾಮಪತ್ರ ಸಲ್ಲಿಸುವವರೆಗೂ ಸುಮಾರು ಅರ್ಧ ಗಂಟೆ ರಸ್ತೆಯುದ್ದಕ್ಕೂ ಸಾವಿರಾರು ಕಾರ್ಯಕರ್ತರು ಘೋಷಣೆ ಕೂಗುತ್ತಾ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾ.ಅಧ್ಯಕ್ಷ ಪರಮೇಶ್ವರ, ಮುಖಂಡರಾದ ಮಂಜುನಾಥ್, ವಕೀಲರಾದ ಚನ್ನೇಗೌಡರು, ಸೊಗಡು ಸೋಮಣ್ಣ, ಗುಂಗರಮೆಳೆ ವೆಂಕಟೇಶ್, ಸದಾಶಿವಯ್ಯ ಇತರರು ಇದ್ದರು.