ಪಕ್ಷ ನಿಷ್ಠೆಗೆ ಸಂದ ಗೌರವ: ನಾಗರಾಜಯ್ಯ
ಕ.ಪ್ರ. ವಾರ್ತೆ ಕುಣಿಗಲ್ ಏ.17
ತಾಲೂಕಿನಲ್ಲಿ ಕಳೆದ ನಲವತ್ತು ವರ್ಷಗಳಿಂದ ಜೆಡಿಎಸ್ ಕಟ್ಟಿ, ಬೆಳೆಸಲು ತಾವು ನೀಡಿದ ಕೊಡುಗೆ, ಪಕ್ಷದ ವರಿಷ್ಠರಾದ ದೇವೇಗೌಡರೊಂದಿಗೆ ತಮ್ಮ ನಿಕಟ ಸಂಬಂಧ ಮತ್ತು ನಿಷ್ಠಾವಂತ ಕಾರ್ಯಕರ್ತನಾಗಿ ತಾವು ಸಲ್ಲಿಸಿದ ಸೇವೆಯ ಫಲವಾಗಿ ಬುಧವಾರ ತಮಗೆ ಪಕ್ಷ ಸಿ ಫಾರಂ ನೀಡಿ ಅಧಿಕೃತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ ಎಂದು ಮಾಜಿ ಸಚಿವ ಡಿ.ನಾಗರಾಜಯ್ಯ ತಿಳಿಸಿದರು.
ಬುಧವಾರ ಮಧ್ಯಾಹ್ನ, ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸೋಮವಾರದಂದು ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡರಿಗೆ ಬಿ ಫಾರಂ ನೀಡಲಾಗಿತ್ತು. ಆದರೆ, ಕಳೆದ ನಾಲ್ಕು ದಶಕಗಳಿಂದ ತಾವು ಪಕ್ಷಕ್ಕೆ ನೀಡಿರುವ ಸೇವೆ, ಪಕ್ಷದ ಏಳಿಗೆಗೆ ಸಲ್ಲಿಸಿರುವ ಸೇವೆ ಗಮನಿಸಿ, ಪಕ್ಷದ ವರಿಷ್ಠರು ತಮ್ಮನ್ನು ಆಯ್ಕೆ ಮಾಡಿದ್ದಾರೆ. ಇದಕ್ಕಾಗಿ ಪಕ್ಷದ ವರಿಷ್ಠರೂ, ತಾಲೂಕಿನವರೇ ಆದ ಜಮೀರ್ ಅಹಮದ್ ಅವರ ಕೊಡುಗೆಯೂ ಸಾಕಷ್ಟಿದೆ ಎಂದರು.
ತಾಲೂಕಿನಲ್ಲಿ ಜೆಡಿಎಸ್ ಸದೃಢವಾಗಿ ಸಂಘಟನೆಗೊಂಡಿದೆ. ಇದರೊಂದಿಗೆ ಕಾಂಗ್ರೆಸ್ನಿಂದ ಜೆಡಿಎಸ್ಗೆ ಸೇರ್ಪಡೆಗೊಂಡ ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡರನ್ನು ಬೆಂಬಲಿಸಿ ಸಾಕಷ್ಟು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡಿದ್ದು, ಪ್ರಸಕ್ತ ಚುನಾವಣೆಯಲ್ಲಿ ಮುದ್ದುಹನುಮೇಗೌಡ, ಅನಸೂಯಮ್ಮ ವೈ.ಕೆ.ಆರ್ ಅವರ ಸಹಕಾರದೊಂದಿಗೆ ಚುನಾವಣೆ ಎದುರಿಸಿ ಅತ್ಯಧಿಕ ಮತಗಳ ಅಂತರದಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದೆ ಎಂದರು. ಪಕ್ಷದಲ್ಲಿ ಯಾವುದೇ ರೀತಿಯ ಬಂಡಾಯ, ಅಸಹಕಾರ, ಭಿನ್ನಾಭಿಪ್ರಾಯಗಳಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡುವದೆ ನಮ್ಮ ಗುರಿ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಹರೀಶ್, ಪ್ರಮುಖರಾದ ಡಾ.ಬಿಎನ್.ರವಿ, ಜಗದೀಶ್, ಲೋಕೇಶ್, ರಮೇಶ್, ತಮ್ಮಣ್ಣ, ಆಯಿಶಾಬೀ, ನರಸಿಂಹಮೂರ್ತಿ, ಈ,ಮಂಜು, ಹಮೀದ್, ಸುರೇಶ್ ಇತರರು ಉಪಸ್ಥಿತರಿದ್ದರು.