'ಮನುಕುಲ ಕಂಡ ಶ್ರೇಷ್ಠ ದಾರ್ಶನಿಕ ಅಂಬೇಡ್ಕರ್'
ಶಿರಾ: ಮಾನವ ಹಕ್ಕುಗಳನ್ನು ಪ್ರತಿಪಾದಿಸಿದ ಡಾ.ಬಿ.ಆರ್. ಅಂಬೇಡ್ಕರ್ ಈ ಮನುಕುಲ ಕಂಡ ಶ್ರೇಷ್ಠ ದಾರ್ಶನಿಕ ಎಂದು ಪ್ರೊ. ಡಾ.ಚಿಕ್ಕಣ್ಣ ಯೆಣ್ಣೇಕಟ್ಟೆ ತಿಳಿಸಿದರು. ಅವರು ತಾಲೂಕು ಆಡಳಿತದಿಂದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ದಕ್ಷಿಣ ಏಷ್ಯಾ ಖಂಡದ ಹೆಸರಾಂತ ಪತ್ರಕರ್ತರೂ ಆಗಿದ್ದರು. ಎಲ್ಲ ಕಾಲಕ್ಕೂ ಎಲ್ಲ ಧರ್ಮ, ಎಲ್ಲ ಜಾತಿಗೂ ಅನ್ವಯವಾಗುವಂತಹ ಸಂವಿಧಾನ ನೀಡಿದ ಹಿರಿಮೆ ಅವರಿಗೆ ಸಲ್ಲುತ್ತದೆ. ಅಂಬೇಡ್ಕರ್ ಅವರು ಕೇವಲ ಒಂದು ಜಾತಿಯ ಆಸ್ತಿಯಲ್ಲ. ಅವರು ಇಡೀ ಮನುಕುಲದ ಆಸ್ತಿ.
ಇಂದು ಬಹುತೇಕ ಹಿಂದುಳಿದ ಜಾತಿಗಳು ಮುಖ್ಯವಾಹಿನಿಗೆ ಬರಲು ಕಾರಣವೇ ಅಂಬೇಡ್ಕರ್ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತಹಸೀಲ್ದಾರ್ ಕುಲಕರ್ಣಿ ವಹಿಸಿದ್ದರು. ಚುನಾವಣಾಧಿಕಾರಿ ದೊರೆರಾಜ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.