ಸುದ್ದಿ ಸಂಕ್ಷೇಪ
'ಜನಪರ ಕಾರ್ಯನಿರ್ವಹಿಸುವ ಅಭ್ಯರ್ಥಿಗೆ ಮತ ನೀಡಿ'
ತಿಪಟೂರು: ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಏಕರೂಪತೆಯಿಂದ ಕೂಡಿದ್ದು, ಯಾವುದೇ ಉನ್ನತ ಸರ್ಕಾರಿ ಹುದ್ದೆಯ ಅಧಿಕಾರಿಗಳು, ರಾಜಕೀಯ ಮುಖಂಡರು ಯಾರೇ ತಪ್ಪು ಮಾಡಿದರು ಅಂತಹವರಿಗೆ ಶಿಕ್ಷೆ ವಿಧಿಸಬೇಕು. ಸರ್ಕಾರಿ ಅಧಿಕಾರಿಗಳಿಗೆ ಸಂಬಳ ನೀಡುವುದು ಜನರ ದುಡ್ಡಾಗಿದ್ದು, ಪ್ರಾಮಾಣಿಕ ಹಾಗೂ ದಕ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಎಸ್.ಸಿ.ಶಿವಣ್ಣ ಶೆಟ್ಟಿಹಳ್ಳಿ ಮತದಾರರಿಗೆ ಮನವಿ ಮಾಡಿದ್ದಾರೆ.
ಸರ್ಕಾರದ ಸವಲತ್ತುಗಳನ್ನು ಪ್ರಜೆಗಳ ಸವಲತ್ತು ಎಂದು ಸಂವಿಧಾನಾತ್ಮಕವಾಗಿ ಕಾರ್ಯರೂಪಕ್ಕೆ ತಂದಲ್ಲಿ ದೇಶದ ಪ್ರಗತಿ ಮತ್ತು ಕಾನೂನು ಸುವ್ಯವಸ್ಥೆಯಿಂದ ಕೂಡಿರಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಬಾರಿ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಜಾತಿ ಧರ್ಮದ ಜನರು ಜನಪರ ಕಾರ್ಯನಿರ್ವಹಿಸುವ ಅಭ್ಯರ್ಥಿಗೆ ಮತ ನೀಡಬೇಕೆಂದು ಎಸ್.ಸಿ.ಶಿವಣ್ಣ ತಿಳಿಸಿದ್ದಾರೆ.
'ಮತ್ತೊಮ್ಮೆ ಗುಬ್ಬಿ ಕ್ಷೇತ್ರದ ಶಾಸಕನಾಗಿ ಆಯ್ಕೆ ಆಗುವೆ'
ಗುಬ್ಬಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮಾಡಿದ ಸಾಧನೆ ಫಲವಾಗಿ ನಾಮಪತ್ರ ಸಲ್ಲಿಸಲು ಕ್ಷೇತ್ರದಾದ್ಯಂತ ನಿರೀಕ್ಷೆಗೂ ಮೀರಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರು ಅಗಮಿಸಿರುವುದಕ್ಕೆ ಧನ್ಯವಾದ ಎಂದು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು. ಗುಬ್ಬಿ ಪಟ್ಟಣದ ಶಿವರಾತ್ರಿ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕ್ಷೇತ್ರದ ಮತದಾರರು ನಾನು ಕಳೆದ ಎರಡು ಅವಧಿಯಲ್ಲಿ ಕ್ಷೇತ್ರದ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದು ಪ್ರಸಕ್ತ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಪೂರ್ಣ ಪ್ರಮಾಣದ ಬೆಂಬಲ ನೀಡಲಿದ್ದು ಮತ್ತೊಮ್ಮೆ ಗುಬ್ಬಿ ಕ್ಷೇತ್ರದ ಶಾಸಕನಾಗಿ ಮತ್ತಷ್ಟು ಮಹತ್ವದ ಸಾಧನೆ ಮಾಡುವುದಾಗಿ ಭರವಸೆ ನೀಡಿದರು. ತಮ್ಮ ಎರಡು ಅವಧಿಯಲ್ಲಿ ಯಾವುದೇ ಜನಾಂಗವನ್ನು ಒಡೆದು ಆಳುವ ನೀತಿ ಅನುಸರಿಸಲಿಲ್ಲ ಎಲ್ಲಾ ಸಮುದಾಯದವರಿಗೂ ಸಮಾನ ಅವಕಾಶ ನೀಡಿದ್ದು ಯಾವುದೇ ಜನಾಂಗಕ್ಕೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದ ಅವರು ಚುನಾವಣೆ ಸಮಯದಲ್ಲಿ ಕೆಲವರು ಅನಗತ್ಯವಾಗಿ ಟೀಕೆ ಮಾಡುತ್ತಿರುವುದು ಸರಿಯಲ್ಲ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಮತದಾರರೇ ಅಂತಹವರಿಗೆ ತಕ್ಕ ಪಾಠ ಕಲಿಸಲಿದ್ದಾರೆಂದು ತಿಳಿಸಿದರು. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಬಹು ಮುಖ್ಯವಾಗಿದ್ದು ಅವರ ತೀರ್ಮಾನದಂತೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದ ಅವರು ಕ್ಷೇತ್ರದ ಎಲ್ಲಾ ವರ್ಗದವರೂ ನನ್ನ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದ್ದು ಈ ಭಾರಿಯೂ ಸಂಪೂರ್ಣವಾದ ಬೆಂಬಲ ನೀಡಲು ಮುಂದಾಗಿರುವುದು ಸಂತೋಷದ ಸಂಗತಿಯಾಗಿದ್ದು ಮುಂಬರುವ ದಿನಗಳಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.