ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಲಾತತ್ವಕೋಶದಿಂದ ಸಾಂಸ್ಕೃತಿಕ ಚರಿತ್ರೆ ಪುನಾರಚನೆ

Mainashree
Updated On : 18 Apr 2013, 11:07 am

ಕನ್ನಡಪ್ರಭ ವಾರ್ತೆ    ತುಮಕೂರು    ಏ.18
ವಿಶ್ವಕೋಶಗಳ ಚರಿತ್ರೆಯಲ್ಲೇ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರವು ಇಂಗ್ಲಿಷ್‌ನಲ್ಲಿ ಪ್ರಕಟಿಸಿದ ಕಲಾತತ್ವಕೋಶವು ವಿಭಿನ್ನವೂ ವಿದ್ವತ್‌ಪೂರ್ಣವೂ ಆದ ವಿಶ್ವಕೋಶವಾಗಿದ್ದು ಅದರ ಮೊದಲ ನಾಲ್ಕು ಸಂಪುಟಗಳನ್ನು ಕನ್ನಡಕ್ಕೆ ತಂದ ಪ್ರಸಾರಾಂಗ, ತುಮಕೂರು ವಿಶ್ವವಿದ್ಯಾನಿಲಯದ ಕಾರ್ಯ ಸ್ತುತ್ಯಾರ್ಹ ಎಂದು ಹಿರಿಯ ವಿದ್ವಾಂಸ, ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ  ಪ್ರಸಾರಾಂಗ ಪ್ರಕಟಿಸಿರುವ ಕಲಾತತ್ವಕೋಶದ ನಾಲ್ಕು ಸಂಪುಟಗಳನ್ನು ಅವರು ಗುರುವಾರ ಲೋಕಾರ್ಪಣೆ ಮಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಹುದುಗಿರುವ ಸಾವಿರಾರು ಅರ್ಥಗಳನ್ನು ಕೊಡುವ ಕೆಲವು ಮೂಲಭೂತ ಪರಿಕಲ್ಪನೆಗಳನ್ನು ಆಯ್ದು ಅದರ ಹುಟ್ಟು, ವಿಕಾಸ, ಅದು ಪಡೆದುಕೊಂಡ  ನಾನಾರ್ಥಗಳನ್ನು ಸಂಶೋಧನೆಯ ಶಿಸ್ತಿನಿಂದ ವಿವರಿಸಿದ ಈ ಕಲಾತತ್ವಕೋಶ ಸಂಪುಟ ಸಾವಿರಾರು ವರ್ಷಗಳ ನಮ್ಮ ಸಾಂಸ್ಕೃತಿಕ ಚರಿತ್ರೆಯನ್ನು ಪುನಾರಚಿಸುವಲ್ಲಿ ಬಹುದೊಡ್ಡ ಕೊಡುಗೆ ನೀಡಿವೆ ಎಂದು ಅವರು ಪ್ರತಿಪಾದಿಸಿದರು.
ಮಹತ್ವದ್ದು: ಕಲಾತತ್ವಕೋಶದ ಸಂಪುಟಗಳಲ್ಲಿ  ಬರುವ ನಾಭಿ ಎಂಬ ಒಂದು ಪರಿಕಲ್ಪನೆ ಜೀವಶಾಸ್ತ್ರೀಯವಾಗಿ, ವಾಸ್ತುಶಾಸ್ತ್ರೀಯವಾಗಿ, ಅನ್ಯಾನ್ಯ ಕಲಾ ಮೀಮಾಂಸೆಗಳಲ್ಲಿ, ಪುರಾಣ ಪುಣ್ಯ ಕಥಾರೂಪಗಳಲ್ಲಿ ಹೇಗೆ ಪ್ರವಹಿಸಿಕೊಂಡು ಬಂದಿದೆ ಎಂಬುದನ್ನು ಸೋದಾಹರಣವಾಗಿ ವಿವರಿಸಿದ ಪ್ರೊ. ಜಿ.ವಿ. ಇಂಥ ಸಂಪುಟಗಳನ್ನು ವಿದ್ವತ್‌ಪೂರ್ಣವಾಗಿ ಕನ್ನಡಕ್ಕೆ ತಂದು ಈ ಪ್ರಯತ್ನ ಚಾರಿತ್ರಿಕವಾಗಿಯೂ ಮತ್ತು ಸಾಂಸ್ಕೃತಿಕವಾಗಿಯೂ ಬಹಳ ಮಹತ್ವದ್ದು ಎಂದು ಬಣ್ಣಿಸಿದರು.
ವಿಶೇಷ ಕಾಳಜಿ: ಕನ್ನಡ ಆವೃತ್ತಿಯ ಸಂಪಾದಕರೂ, ತುಮಕೂರು ವಿವಿ ಪ್ರಸಾರಾಂಗದ ನಿರ್ದೇಶಕರೂ ಆಗಿರುವ ಡಾ. ನಿತ್ಯಾನಂದ ಬಿ. ಶೆಟ್ಟಿಯವರು  ಕಲಾತತ್ವಕೋಶಗಳ ಸಂಪುಟ ಚತುಷ್ಟಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾಡುತ್ತಾ ಈ ಸಂಪುಟಗಳ ಕನ್ನಡ ಅವತರಣಿಕೆಯು ಕುಲಪತಿ ಪ್ರೊ. ಎಸ್ ಸಿ. ಶರ್ಮಾರವರ ವಿಶೇಷ ಕಾಳಜಿಯಿಂದ ಸಾಧ್ಯವಾಗಿದೆ ಎಂದು ಸ್ಮರಿಸಿಕೊಂಡು ಶತಾಯುಷಿ ಶಿವಕುಮಾರ ಸ್ವಾಮಿಗಳ ಹೆಸರಿನ ಈ ಸಭಾಂಗಣದಲ್ಲಿ ಕನ್ನಡದ ಇನ್ನೋರ್ವ ಶತಾಯುಷಿ ವಿದ್ವಾಂಸ ಪ್ರೊ. ಜಿ. ವಿ. ವೆಂಕಟಸುಬ್ಬಯ್ಯನವರು ಶತ-ಶತಮಾನಗಳಿಂದ ನಮ್ಮ ದೇಶದಲ್ಲಿ ಹಾಸುಹೊಕ್ಕಾಗಿದ್ದ ಭಾರತೀಯ ಕಲಾ ಮೀಮಾಂಸೆಯ ಕೆಲವೊಂದು ಮೂಲಭೂತ ಪರಿಕಲ್ಪನೆಗಳ ಸಮಗ್ರ ವಿವರಣಾ ಕೋಶವಾಗಿರುವ ಕಲಾತತ್ವಕೋಶದ ಸಂಪುಟಗಳನ್ನು ಬಿಡುಗಡೆಗೊಳಿಸುವುದು ಶತಮಾನಕ್ಕೊಂದು ಸಲ ಮಾತ್ರ ಸಂಭವಿಸುವ ಘಟನಾ ವಿಶೇಷ ಎಂದರು.
ಪ್ರೊ. ಜಿ. ವೆಂಕಟಸುಬ್ಬಯ್ಯನವರನ್ನು, ಶಿಕ್ಷಣ ತಜ್ಞ ಡಾ. ಎಂ. ಕೆ. ಪಾಂಡುರಂಗ ಶೆಟ್ಟಿಯವರನ್ನು  ಮತ್ತು ತುಮಕೂರು ವಿವಿಗೆ ತಮ್ಮ ಸಂಗ್ರಹದಲ್ಲಿ ಅಪಾರ ಪ್ರಮಾಣದ ಇಂಗ್ಲಿಷ್ ಪುಸ್ತಕಗಳನ್ನು ದಾನ ಮಾಡಿದ ಪ್ರೊ. ಕೆ. ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಕುಲಪತಿ ಪ್ರೊ. ಎಸ್. ಸಿ.  ಶರ್ಮಾ ಸ್ವಾಗತಿಸಿದರು. ಕುಲಸಚಿವ  ಪ್ರೊ. ಡಿ. ಶಿವಲಿಂಗಯ್ಯ ವಂದಿಸಿದರು. ಉಪಕುಲಸಚಿವ ರಾಜಶೇಖರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement