ಬಾಂಬ್ ಸ್ಫೋಟ: ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಸಜ್ಜು
ಕ.ಪ್ರ. ವಾರ್ತೆ ತುಮಕೂರು ಏ.18
ಬೆಂಗಳೂರಿನ ಮಲ್ಲೇಶ್ವರದ ಜನನಿಬಿಡ ಪ್ರದೇಶದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಲಾಭವನ್ನು ಪಡೆಯಲು ಕಾಂಗ್ರೆಸ್ ತಯಾರಿ ನಡೆಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಹಾಗೂ ವಿಶ್ವನಾಥ್ ಹಾಗೂ ಇತರರು ಸ್ಪೋಟಕ್ಕೆ ಬಿಜೆಪಿಯೇ ನೇರ ಹೊಣೆ. ಬಿಜೆಪಿಯವರೇ ಬಾಂಬ್ ಸ್ಫೋಟಕ್ಕೆ ಕಾರಣಕರ್ತರು ಎನ್ನುವಂತೆ ಮಾತನಾಡಿದ್ದಾರೆ. ವಿಶ್ವನಾಥ್ ಅಂತೂ ಮೇ 5 ರ ವಿಧಾನಸಭೆ ಚುನಾವಣೆ ಮತದಾನಕ್ಕೂ ಮುಂಚೆಯೇ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ಜನತೆಯ ಮುಂದೆ ಸತ್ಯ ಬಹಿರಂಗಗೊಳಿಸಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ. ಈ ಆರೋಪಗಳನ್ನು ನೋಡಿದರೆ ಕಾಂಗ್ರೆಸ್ ಸಂಪೂರ್ಣವಾಗಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂಬ ಅನುಮಾನ ಕಾಡುತ್ತಿದೆ ಎಂದರು.
ಸಿಬಿಐನಿಂದಲೇ ತನಿಖೆ ನಡೆಸಲಿ: ಕೇಂದ್ರೀಯ ತನಿಖಾ ದಳ (ಸಿಬಿಐ) ಕೇಂದ್ರ ಸರ್ಕಾರದ ಒಂದು ತನಿಖಾ ಸಂಸ್ಥೆ. ಬೇಕಾದರೆ ಸಿಬಿಐ ನಿಂದಲೇ ತನಿಖೆ ನಡೆಸಿ, ಸತ್ಯಾಂಶವನ್ನು ಹೊರಗೆಡವಲಿ. ಅದು ಬಿಟ್ಟು ವಿನಾ ಕಾರಣ ಆರೋಪ ಮಾಡಿ, ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುವುದು ಸರಿಯಲ್ಲ ಎಂದು ಸೊಗಡು ಅಭಿಪ್ರಾಯಪಟ್ಟರು.
ಶಿಕ್ಷೆಯಾಗಲೇಬೇಕು: ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣದ ರೂವಾರಿಗಳು ಯಾರೇ ಆದರೂ ಸರಿ ಶಿಕ್ಷೆಯಾಗಲೇಬೇಕು. ಕೇಂದ್ರ ಸರ್ಕಾರ ತನಿಖೆಗೆ ಕೂಡಲೇ ಸಹಕರಿಸಬೇಕು. ನಿಷ್ಪಕ್ಷಪಾತವಾಗಿ ತನಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಜತೆ ಸಹಕರಿಸಲಿ. ಶಾಂತಿ - ಸೌಹಾರ್ದತೆ ಕಾಪಾಡಲು ಮುಂದಾಗಲಿ ಎಂದು ಸೊಗಡು ಕರೆ ನೀಡಿದರು.
ಉಗ್ರರ ತಾಣವಾಗಲು ಬಿಟ್ಟಿಲ್ಲ: ಕಳೆದ 20 ವರ್ಷಗಳಿಂದ ತುಮಕೂರು ನಗರದ ಶಾಸಕನಾಗಿದ್ದೇನೆ. ಶಾಂತಿ, ಸೌಹಾರ್ದತೆ ಕಾಪಾಡಿದ್ದು ತಮ್ಮ ಅವಧಿಯ ಸಾಧನೆ. ತುಮಕೂರು ನಗರವನ್ನು ಉಗ್ರರ ತಾಣವಾಗಲು ಬಿಟ್ಟಿಲ್ಲ. ಮಟ್ಟ ಹಾಕಿದ್ದೇನೆ. ಮಾಫಿಯಾ ಮಟ್ಟ ಹಾಕಿದ್ದೇನೆ. ಇದು ತಮ್ಮ ದೊಡ್ಡ ಸಾಧನೆ. ಈ ಕುರಿತು ತಮಗೆ ತೃಪ್ತಿಯಿದೆ ಎಂದು ಸಚಿವರು ಹೆಮ್ಮೆಯಿಂದ ಹೇಳಿಕೊಂಡರು.
ಹೊಸಬರನ್ನು ತಪಾಸಣೆ ಮಾಡಬೇಕು: ರಾಜ್ಯ ಹಾಗೂ ಜಿಲ್ಲೆಗಳಿಗೆ ಬರುವ ಹೊಸಬರನ್ನು ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಜನ ಎಚ್ಚೆತ್ತುಕೊಳ್ಳಬೇಕು. ಅಂಜನ ಹಾಕಿ ಹುಡುಕುವ ಹಾಗೆ ಹುಡುಕಿ ಸಂಶಯಾಸ್ಪದ ವ್ಯಕ್ತಿಗಳು, ಉಗ್ರರನ್ನು ಸೆರೆಹಿಡಿಯಲು ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.