ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೆಜೆಪಿಗೆ ವರದಾನ ಕಾಂಗ್ರೆಸ್‌ನ ಭಿನ್ನಮತ

Mainashree
Updated On : 20 Apr 2013, 10:42 am

ತುರುವೇಕೆರೆ: ತುರುವೇಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಯಲ್ಲಿ ಹೈಕಮಾಂಡ್ ಎಡವಿರುವ ಪರಿಣಾಮ ಕ್ಷೇತ್ರದಲ್ಲಿ ಭುಗಿಲೆದ್ದಿರುವ ಭಿನ್ನಮತ ಕೆಜೆಪಿಗೆ ವರದಾನವಾಗಿ ಪರಿಣಮಿಸಿದೆ.
 ಕಾಂಗ್ರೆಸ್‌ನಿಂದ ಇದೇ ಪ್ರಪ್ರಥಮ ಬಾರಿಗೆ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಿರುವುದು ಹಲವಾರು ಪ್ರಮುಖ ಮುಖಂಡರಿಗೆ ಬೇಸರತರಿಸಿದೆ. ಪಕ್ಷದಲ್ಲಿ ಸುಮಾರು 20 ಕ್ಕೂ ಹೆಚ್ಚು ಪುರುಷ ಆಕಾಂಕ್ಷಿಗಳಿದ್ದರು. ಆದರೆ ಯುವಕರಿಗೆ ಹಾಗೂ ಮಹಿಳೆಯೊರ್ವರಿಗೆ ಜಿಲ್ಲೆಗೊಂದರಂತೆ ಟಿಕೆಟ್ ನೀಡಬೇಕು ಎಂಬ ಮಾನದಂಡದ ಆಧಾರದ ಮೇರೆಗೆ ಟಿಕೆಟ್ ಗಿಟ್ಟಿಸಿಕೊಂಡಿರುವ ಗೀತಾ ರಾಜಣ್ಣರಿಗೆ ಕ್ಷೇತ್ರದ ಹಲವಾರು  ನಾಯಕರು ಸೆಡ್ಡು ಹೊಡೆದಿದ್ದಾರೆ.
 ಬಂಡಾಯ ಕಾಂಗ್ರೆಸ್‌ನ ಅಭ್ಯರ್ಥಿಯನ್ನಾಗಿ ಎಂ.ಎಲ್. ಗೋವಿಂದೇಗೌಡರನ್ನು ಕಣಕ್ಕಿಳಿಸುವ ಸನ್ನಾಹವೂ ನಡೆಯಿತು. ಆದರೆ ಗೋವಿಂದೇಗೌಡ ಚುನಾವಣಾ ಕಣಕ್ಕೆ ಇಳಿಯದೇ ಮೌನಕ್ಕೆ ಶರಣಾದರು. ಆದರೆ ಕಾಂಗ್ರೆಸ್‌ನ ಹಲವಾರು ಪ್ರಮುಖ ನಾಯಕರೇ ಗೀತಾ ರಾಜಣ್ಮನವರು ನಾಮಪತ್ರ ಸಲ್ಲಿಸುವ ವೇಳೆ ಭಾಗವಹಿಸದೇ ತಮ್ಮ ಅಸಮಾಧಾನವನ್ನು ನೇರವಾಗೇ ಪ್ರದರ್ಶಿಸಿದ್ದರು.
ದಿನೇ ದಿನೇ ಅಧಿಕ: ಈಗಿನ ಸ್ಥಿತಿಯಲ್ಲಿ ಕಾಂಗ್ರೆಸ್‌ನಲ್ಲಿನ ಭಿನ್ನಮತ ದಿನೇ ದಿನೇ ಅಧಿಕವಾಗುತ್ತಲೇ ಇದೆ. ಕಾಂಗ್ರೆಸ್ ನ ಅಭ್ಯರ್ಥಿಯ ಬಗ್ಗೆ ಅಸಮಾಧಾನ ಮನೆ ಮಾಡಿರುವುದು ಜೆಡಿಎಸ್‌ಗೆ ಲಾಭವಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಮಾಜಿ ಶಾಸಕ ಎಚ್.ಬಿ.ನಂಜೇಗೌಡರ ವಿನಃ ಬೇರ್ಯಾರೂ ಜೆಡಿಎಸ್‌ನ ಕಡೆ ಮುಖ ಮಾಡಿಲ್ಲ. ಉಳಿದ ಬಹುತೇಕ ಮುಖಂಡರು ಕಾರ್ಯಕರ್ತಗಳು ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪನವರನ್ನು ಸಮರ್ಥವಾಗಿ ಎದುರಿಸಲು ಅರ್ಹ ಎಂಬುದಾಗಿ ಬಿಂಬಿತವಾಗಿರುವ ಕೆಜೆಪಿ ಅಭ್ಯರ್ಥಿ ಮಸಾಲಾ ಜಯರಾಂ ಅವರ ಪರ ನಿಲ್ಲಲು ಮುಂದಾಗಿದ್ದಾರೆ. ಹಾಲಿ ಶಾಸಕರ ವಿರೋಧಿ ಬಣವೂ ಈ ಹಿಂದೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿತ್ತು. ಕಾಂಗ್ರೆಸ್ ಅಭ್ಯರ್ಥಿ ತಮಗೆ ಹಿಡಿಸದ ಹಿನ್ನೆಲೆಯಲ್ಲಿ ಕೆಜೆಪಿಯ ಅಭ್ಯರ್ಥಿ ಕಡೆ ವಾಲಿ ಮತ್ತಷ್ಟು ಶಕ್ತಿ ತುಂಬುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement