ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ
ಕ.ಪ್ರ. ವಾರ್ತೆ ಶಿರಾ ಏ.20
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿ, ದೇವೆಗೌಡರ ಒಡನಾಡಿ, ಪಕ್ಷದ ಹಿರಿಯ ಮುಖಂಡ, ಮಾಜಿ ಸಚಿವ ಬಿ.ಸತ್ಯನಾರಾಯಣ ಅವರನ್ನು ಶಿರಾ ಜನತೆ ಗೆಲ್ಲಿಸುವ ಮೂಲಕ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ತನ್ನಿ ಎಂದು ತಿಳಿಸಿದರು.
ಅವರು ಪಟ್ಟಣದ ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರದ ಆವರಣದಲ್ಲಿ ತಾಲೂಕು ಜೆಡಿಎಸ್ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರಾಜ್ಯಕ್ಕೆ ಅನ್ಯಾಯ ಮಾಡಿವೆ. ನೀರಿಲ್ಲದಿದ್ದರೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಅವರ ಒತ್ತಾಯಕ್ಕೆ ಮಣಿದು ಕರ್ನಾಟಕದ ರೈತರನ್ನು ಬಲಿ ಕೊಟ್ಟಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ನೀರಿನ ವಿಚಾರದಲ್ಲಿ ನ್ಯಾಯ ಒದಗಿಸಿ ನೀರಾವರಿ ಯೋಜನೆಗಳಿಗಾಗಿ 65 ಸಾವಿರ ಕೋಟಿ ರು.ಗಳನ್ನು ಮೀಸಲಿಡಲಾಗುವುದು. ಇದೇ ಅಲ್ಲದೆ ಸಮುದ್ರಕ್ಕೆ ಹರಿಯುತ್ತಿರುವ ಹೆಚ್ಚುವರಿ ನೀರನ್ನು ಮಧ್ಯ ಕರ್ನಾಟಕದ ನೀರಾವರಿ ಯೋಜನೆಗಳಿಗಾಗಿ ಬಳಸಿಕೊಳ್ಳಲಾಗುವುದು ಎಂದರು.
ಬೆಣ್ಣೆ ಮಾತಿಗೆ ಮರುಳಾಗದಿರಿ: ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಯಾದವ ಸಮಾಜದವರ ಮನೆಯಲ್ಲಿ ಗ್ರಾಮ ವಾಸ್ತವ್ಯಕ್ಕಾಗಿ ಶಿರಾಕ್ಕೆ ಬಂದಾಗ ಮದಲೂರು ಕೆರೆಗೆ ನೀರು ಹರಿಸುವ ಯೋಜನೆಗೆ ಒಪ್ಪಿಗೆ ನೀಡಿದವನು ನಾನು. ಈಗ ಜಯಚಂದ್ರ ಅವರು ಮದಲೂರು ಕೆರೆಗೆ ನೀರು ಹರಿಸುವ ಯೋಜನೆಗೆ ನಾನೇ ಕಾರಣ ಎನ್ನುತ್ತಿದ್ದಾರೆ.
ಜಯಚಂದ್ರ ಅವರ ಬೆಣ್ಣೆಯ ಮಾತಿಗೆ ಮರುಳಾಗಬೇಡಿ. ಸೌಮ್ಯ ಸ್ವಾಭಾವದ ರೈತರ ತುಡಿತಕ್ಕಾಗಿ ಮಣಿಯುವ ಮಾಜಿ ಸಚಿವ ಬಿ.ಸತ್ಯನಾರಾಯಣ ಅವರನ್ನು ಗೆಲ್ಲಿಸಿ ಎಂದರು.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಅಂಗವಿಕಲರಿಗೆ ಮಾಶಾಸನ, ವಿಧವಾ ಹಾಗೂ ವೃದ್ಧಾಪ್ಯ ವೇತನ ಹೆಚ್ಚಿಗೆ ಮಾಡುವುದಲ್ಲದೆ ಅಂಗನವಾಡಿ ಕಾರ್ಯಕರ್ತಯರಿಗೆ ಕಾಯಂ ಮಾಡಿ ವೇತನ 6000 ರು. ನೀಡಲಾಗುವುದು ಎಂದರು.
ಮಾಜಿ ಸಚಿವ ಬಿ.ಸತ್ಯನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಾ.ಹುಲಿನಾಯ್ಕರ್, ತಾಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ನಗರ ಜೆಡಿಎಸ್ ಅಧ್ಯಕ್ಷ ವಾಜೀದ್, ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್, ಬರಗೂರು ಶಿವಕುಮಾರ್, ಎಂ. ಚಿದಾನಂದ್, ಕೆ.ಎಂ. ಹೆಂಜಾರಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ಟಿ.ರಘು,
ಗಡಾರಿ ಹನುಮಂತಪ್ಪ, ನಗರಸಭೆ ಸದಸ್ಯ ಆರ್.ಉಗ್ರೇಶ್ ಸೇರಿದಂತೆ ಹಲವರು ಹಾಜರಿದ್ದರು.