ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಗರಸಭೆ ವಿರುದ್ಧ ಪ್ರತಿಭಟನೆ

Mainashree
Updated On : 20 Apr 2013, 10:41 am

ತಿಪಟೂರು: ನಗರದ ಜನತೆ ನೀರಿಗಾಗಿ ಇಡೀ ದಿನವನ್ನೇ ವ್ಯಯಿಸಬೇಕಾದ ಸ್ಥಿತಿ ಉಂಟಾಗಿದ್ದು, ಈ ಬಗ್ಗೆ ನಗರಸಭೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯದಿಂದಿರುವುದನ್ನು ಖಂಡಿಸಿ ನೊಂದ ನೂರಾರು ನಾಗರಿಕರು, ನೂತನ ನಗರಸಭಾ ಸದಸ್ಯರುಗಳು ನಗರಸಭೆ ಮುಂದೆ ಶನಿವಾರ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
 ನಗರದ 31 ವಾರ್ಡ್‌ಗಳಲ್ಲೂ ಕುಡಿಯುವ ನೀರಗೆ ಹಾಹಾಕಾರವಿದ್ದು, ನಗರಕ್ಕೆ ನೀರು ಸರಬರಾಜು ಮಾಡುವ ಪ್ರಮುಖ ಈಚನೂರು ಕೆರೆ ಬತ್ತಿ ಹೋಗಿ ತಿಂಗಳಾದರೂ ನಗರಸಭೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಮಾಡಿರುವುದರಿಂದ ನಾಗರಿಕರು ಕಡು ಬೇಸಿಗೆಯಲ್ಲಿ ಹಗಲಿರುಳೂ ನೀರಿಗಾಗಿ ಪರದಾಡುವಂತೆ ಮಾಡುತ್ತಿರುವ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿತೋರಿಸುತ್ತಿದೆ.
 ಹೇಮಾವತಿ ನೀರು ಇಲ್ಲದಿರುವುದರಿಂದ ಬೋರ್‌ವೆಲ್‌ಗಳ ನೀರನ್ನೇ ಸಾರ್ವಜನಿಕರು ನಂಬಿಕೊಂಡಿದ್ದು, ಈ ನೀರನ್ನೂ ಸಹ ವಾರಗಟ್ಟಲೆಯಾದರೂ ಬಿಡುತ್ತಿಲ್ಲ. ಸ್ಟಾರ್ಟರ್, ಮೋಟಾರ್ ಅಥವಾ ಪೈಪ್ ಲೈನ್ ರಿಪೇರಿ ನೆಪದಲ್ಲಿ ಬೀದಿ ನಲ್ಲಿ ನೀರನ್ನು ಸಕಾಲಕ್ಕೆ ನಿತ್ಯವೂ ಬಿಡದಿರುವುದಕ್ಕೆ ನಗರದ ಮಹಿಳೆಯರಂತೂ ನಗರಸಭೆ ವಿರುದ್ಧ ಕಿಡಿಕಾರುತ್ತಿರುವುದು ನಗರದಾದ್ಯಂತ ಸರ್ವಸಾಮಾನ್ಯವಾಗಿದೆ.
ನೀರು ಬಿಡಿ:  ಬೇಸಿಗೆ ಆರಂಭದ ಈ ಸಮಯದಲ್ಲಾದರೂ ನಗರಸಭಾ ಪೌರಾಯುಕ್ತರು ನಗರದ ನಾಗರಿಕರ ನೀರಿನ ಭವಣೆ ಅರಿತು ನಗರದ ಎಲ್ಲಾ ಬೀದಿ ನಲ್ಲಿಗಳಲ್ಲಿ ವಿದ್ಯುತ್ ಇರುವ ಎಲ್ಲಾ ವೇಳೆಯಲ್ಲೂ ನೀರು ಬಿಡಿಸಿ ನಗರದ ಜನತೆಗೆ ಉಂಟಾಗಿರುವ ಹಾಹಾಕಾರವನ್ನು ತಪ್ಪಿಸಬೇಕಾಗಿದೆ. ಜೊತೆಗೆ ದಿನಪೂರ್ತಿ ಮಕ್ಕಳು, ಮಹಿಳೆಯರು ಬಿಂದಿಗೆ ಹಿಡಿದುಕೊಂಡು ನೀರಿಗಾಗಿ ಬೀದಿ ನಲ್ಲಿಗಳನ್ನು ಹುಡುಕಿಕೊಂಡು ನಡೆಸುತ್ತಿರುವ ಅಲೆದಾಟಕ್ಕೆ ನಗರಸಭೆ ಇತಿಶ್ರೀ ಹಾಡುವ ಮೂಲಕ ನಾಗರಿಕರ ನೀರಿನ ಆಕ್ರೋಶ ತಣಿಸಬೇಕೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರಿಗೆ ಉತ್ತರಿಸಿದ ಪೌರಾಯುಕ್ತರು ಮುಂದಿನ 3-4 ದಿನಗಳೊಳಗೆ ಸಮಸ್ಯೆ ಬಗೆ ಹರಿಸುವ ಭರಸವೆ ನೀಡಿದರು.
ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರುಗಳಾದ ಟಿ.ಜೆ.ಲಿಂಗರಾಜು, ನಿಜಗುಣ, ಅಬ್ದುಲ್, ಯೋಗೀಶ್,ರಾಜು ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement