'ನಾನು ಎಂದಿಗೂ ಗೌಡರ ಅಭಿಮಾನಿ'
ಅರಸೀಕೆರೆ: ನಾನೆಂದಿಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಭಿಮಾನಿ. ಹೀಗೆ ಹೇಳಿದವರು ಕೆಲವೇ ದಿನಗಳ ಹಿಂದೆಯಷ್ಟೇ ಬೇಲೂರು ಕ್ಷೇತ್ರದಿಂದ ಟಿಕೆಟ್ ಸಿಗಲಿಲ್ಲ ಎಂದು ಜೆಡಿಎಸ್ ತೊರೆದ ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ.ಜವರೇಗೌಡರು. ಅಚ್ಚರಿ ಎಂದರೇ ಅವರು ಹೀಗೆ ಹೇಳಿದ್ದು ಕಾಂಗ್ರೆಸ್ ಕಾರ್ಯಕರ್ತ ಕೆ.ಕೆ. ಅಮೀರ್ ನಿವಾಸದಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ. ತಮ್ಮ ಹಿತಕ್ಕಾಗಿ ಇನ್ನೊಬ್ಬರನ್ನು ಬಲಿ ತೆಗೆದುಕೊಳ್ಳುವಂಥ ಸ್ವಾರ್ಥ ರಾಜಕಾರಣಿಗಳನ್ನು ಸೋಲಿಸಬೇಕೆಂದು ಕೆ.ಎಂ. ಶಿವಲಿಂಗೇಗೌಡರ ಹೆಸರು ಹೇಳದೇ ಟೀಕಿಸಿದ ಅವರು, ಕಳೆದ ವಿಧಾನಸಭೆ ಚುನಾವಣೆ ಬೇಲೂರು ಕ್ಷೇತ್ರದಲ್ಲಿ ಜೆಡಿಎಸ್ 3ನೇ ಸ್ಥಾನ ಪಡೆದಿದ್ದಾಗ ಆ ಕ್ಷೇತ್ರದ ಜವಾಬ್ದಾರಿಯನ್ನು ನನಗೆ ನೀಡಿದಾಗ ಪ್ರಾಮಾಣಿಕವಾಗಿ 3 ವರ್ಷಗಳಿಂದ ಜೆಡಿಎಸ್ ಸಂಘಟಿಸಿದೆ. ಆ ಕ್ಷೇತ್ರಕ್ಕೆ ಟಿಕೆಟ್ ನೀಡುವುದಾಗಿ ದೇವೇಗೌಡರು ಭರವಸೆ ನೀಡಿದ್ದರು ಎಂದು ಹೇಳಿದರು. ಆದರೆ, ಇತ್ತೀಚೆಗೆ ನಡೆದ ಸಭೆಯಲ್ಲಿ ದೇವೇಗೌಡರು ನನಗೆ ಟಿಕೆಟ್ ಎಂದು ಘೋಷಣೆ ಮಾಡಿದ ನಂತರವೂ ಶಾಸಕ ಶಿವಲಿಂಗೇಗೌಡ ಅನಗತ್ಯವಾಗಿ ಮಧ್ಯೆ ಪ್ರವೇಶ ಮಾಡಿ, ಬಿ.ಸಿ. ಮಂಜುನಾಥ್ ಹೆಸರು ಪ್ರಸ್ತಾಪಿಸಿದರು. ಅರಸೀಕೆರೆ ಕ್ಷೇತ್ರದಲ್ಲಿ ಕುರುಬ ಜನಾಂಗದ ಮತ ಪಡೆಯಲು ಸ್ವಾರ್ಥ ಮರೆದರು ಟೀಕಿಸಿದರು. ನಾನು ಬಾಲ್ಯದಿಂದಲೇ ದೇವೇಗೌಡರ ಒಡನಾಟ ಹೊಂದಿ ಎಲ್ಲಾ ರೀತಿಯಿಂದಲೂ ಬೆಳೆದವನು. ಅವರ ಆಶೀರ್ವಾದದಿಂದಲೂ ರಾಜಕೀಯವಾಗಿ ಬೆಳೆದೆ. ಅವರ ಪ್ರೀತಿ, ವಿಶ್ವಾಸ ನಕ್ಕೆ ಚಿರಋಣಿ. ಈಗಲೂ ತಾವು ದೇವೇಗೌಡರ ಅಭಿಮಾನಿಯಾಗಿ ಮುಂದುವರಿಯುತ್ತೇನೆ ಎಂದು ಹೇಳಿದರು. ತಮ್ಮ ಹಿತೈಷಿಗಳೊಂದಿಗೆ ಚರ್ಚಿಸಿ, ಕೆಲವೇ ದಿನಗಳಲ್ಲಿ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು. ಕೆಜೆಪಿ, ಬಿಜೆಪಿ ಮನಸ್ಥಿತಿ ಒಗ್ಗುವುದಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದರು ಜವರೇಗೌಡರು.