ಮಧುಗಿರಿ ಕ್ಷೇತ್ರದ ಋಣ ನಮ್ಮ ಮೇಲಿದೆ
ಕ.ಪ್ರ. ವಾರ್ತೆ ಮಧುಗಿರಿ ಏ.20
ಮಧುಗಿರಿ ಕ್ಷೇತ್ರದ ಜನತೆ ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಎಂದೆಂದಿಗೂ ಮರೆಯಲಾರೆ. ನಿಮ್ಮ ಋಣ ನಮ್ಮ ಕುಟುಂಬದ ತಲೆ ಮೇಲಿದೆ. ಆ ಋಣ ತಿರೀಸುವುದಾಗಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ಇಲ್ಲಿನ ಲಾಲ್‌ಬಹುದ್ದೂರ್ ಶಾಸ್ತ್ರಿ ಮೈದಾನದಲ್ಲಿ ಏರ್ಪಟಾಗಿದ್ದ ಮಧುಗಿರಿ ತಾಲೂಕು ಜೆಡಿಎಸ್ ಚುನಾವಣಾ ಪ್ರಚಾರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಧುಗಿರಿ ಕ್ಷೇತ್ರಕ್ಕೂ ದೇವೇಗೌಡರ ಕುಟುಂಬಕ್ಕೂ ಏನು ಬಾಂಧವ್ಯವೋ ಗೊತ್ತಿಲ್ಲ, ಈಗಿನ ಚುನಾವಣೆಯಲ್ಲಿ ಕೂಡ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಕಾರ್ಯಕರ್ತರಲ್ಲಿ ಆತಂಕ ಸೃಷ್ಟಿಸಿತ್ತು. ಆಗ ನಾನೇ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದೆ. ಹಿಂದಿನ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಗೌರಿಶಂಕರ್ ಆಪರೇಷನ್ ಕಮಲಕ್ಕೆ ಸಿಕ್ಕಾಗ ಕೂಡ ಇಂಥದ್ದೆ ಸಮಸ್ಯೆ ಎದುರಾಗಿತ್ತು.
ಆಗ ನಿಮ್ಮೆಲ್ಲರ ಒತ್ತಾಯದ ಮೇರೆಗೆ ನನ್ನ ಪತ್ನಿ ಕಣಕ್ಕಿಳಿಸಿದ್ದೆವು. ಆಗ ನಡೆದ ಉಪಚುನಾವಣೆಯಲ್ಲಿ ದೇವೇಗೌಡರ ಕುಟುಂಬದವರು ಗೆದ್ದರೆ ಈ ಭಾಗದ ಸಮಸ್ಯೆ ಬಗೆ ಹರಿಯಬಹುದು ಎಂಬ ನಂಬಿಕೆಯಿಂದ ಅನಿತಾ ಅವರನ್ನು ಹಳ್ಳಿ ಹಳ್ಳಿಯಲ್ಲೂ ಮಡಲಕ್ಕಿ ತುಂಬಿ ಉಡುಗೊರೆ ಕೊಟ್ಟು ಗೆಲ್ಲಿಸಿ ಕೊಟ್ಟಿದ್ದೀರಾ. ಪಾವಗಡ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಶಿರಾ ತಾಲೂಕುಗಳು ಶುದ್ಧ ಕುಡಿವ ನೀರಿಲ್ಲದೆ ಜನತೆ ಪರಿತಪಿಸುವುದನ್ನು ಕಂಡಿದ್ದೇನೆ. ನಾನು ಬಡತನ ಮರೆತಿಲ್ಲ. ಈ ಕ್ಷೇತ್ರವನ್ನು ಎಂದಿಗೂ ಕಡೆಗಣಿಸುವ ಮಾತಿಲ್ಲ, ಹಾಗಾಗಿ ಮಧುಗಿರಿ ಕ್ಷೇತ್ರದ ಜನರ ಋಣ ನಮ್ಮ ಕುಟುಂಬದ ತಲೆ ಮೇಲಿದೆ. ಅದನ್ನು ನಾನು ಎಂದಿಗೂ ಮರೆಯಲಾರೆ ಎಂದರು.
ಪ್ರಯತ್ನಪಟ್ಟು ಕಣಕ್ಕಿಳಿಸಿದ್ದೇವೆ: ಈ ಚುನಾವಣೆಯಲ್ಲಿ ಅಭ್ಯರ್ಥಿ ವೀರಭದ್ರಯ್ಯ ಅವರನ್ನು ಶತ ಪ್ರಯತ್ನ ಪಟ್ಟು ಕಣಕ್ಕಿಳಿಸಿದ್ದೇವೆ. ಈ ಸಲ ಎಲ್ಲ ಹಿರಿಯ, ಕಿರಿಯ ಮುಖಂಡರು, ಕಾರ್ಯರ್ಕರು ಒಗ್ಗೂಡಿ ವೀರಭದ್ರಯ್ಯ ಅವರ ಗೆಲವಿಗೆ ಶ್ರಮಿಸಬೇಕು ಎಂದು ಕರೆಯಿತ್ತ ಕುಮಾರಸ್ವಾಮಿ ಕಾಂಗ್ರೆಸ್ ಅಭ್ಯರ್ಥಿ ಬ್ಯಾಂಕಿನಿಂದ ಸಾಲ ಕೊಟ್ಟರೆ ಆ ಸಾಲ ಮನ್ನಾ ಮಾಡಲು ನಾವೇ ಬರಬೇಕು. ಆದ ಕಾರಣ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ಅಭ್ಯರ್ಥಿ ಎಚ್‌ಡಿಕೆ ಎಂದು ಭಾವಿಸಿ ವೀರಭದ್ರಯ್ಯ ಅವರನ್ನು ಗೆಲ್ಲಿಸಿ ಎಂದರು.
ಮನೆ ಕಟ್ಟಿಸಿ ಕೊಡುತ್ತೇವೆ: ಜೆಡಿಎಸ್ ಅಧಿಕಾರಕ್ಕೆ ಬಂದ ನಂತರ ಪ್ರಣಾಳಿಕೆ ಪ್ರಕಾರ ರಾಜ್ಯದ ಎಲ್ಲ ವಸತಿ ಹೀನರಿಗೂ ಮನೆ ಕಟ್ಟಿಸಿ ಕೊಡುವೆವು. ಸತತ ಬರಗಾಲಕ್ಕೆ ತುತ್ತಾಗಿರುವ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕೈಗೊಳ್ಳಲು 65 ಸಾವಿರ ಕೋಟಿ ರು.ವೆಚ್ಚದ ಯೋಜನೆ ರೂಪಿಸಲಾಗಿದೆ. ಮಧುಗಿರಿ ಜನರಿಗೆ ಕುಡಿವ ಮತ್ತು ಕೃಷಿಗೆ ನೀರು ಒದಗಿಸುವ ಜೊತೆಗೆ ಗ್ರಾಮೀಣ ಜನರ ಕಲ್ಯಾಣಕ್ಕಾಗಿ ಮುಂದಿನ 5 ವರ್ಷಕ್ಕೆ 75 ಸಾವಿರ ಕೋಟಿ ರು.ವೆಚ್ಚದ ಬೃಹತ್ ಕಾರ್ಯಕ್ರಮ ರೂಪಿಸಲು ಹೊರಟಿದ್ದೇವೆ. ಪ್ರತಿ ಕುಟುಂಬಕ್ಕೆ ಒಂದೇ ವರ್ಷದಲ್ಲಿ ವಸತಿ ಕೊಡುತ್ತೇವೆ. ಅಧಿಕಾರಕ್ಕೆ ಬಂದ ಮರು ದಿನವೇ 1500 ರು.ಮಾಸಶಾನ,ಬಡ ಕುಟುಂಬದ 5-12 ತಿಂಗಳ ಹೆಣ್ಣು ಮಗು ಆರೋಗ್ಯ, ಪೌಷ್ಟಿಕ ಆಹಾರ ಪಡೆಯಲು 5 ಸಾವಿರ, ಬಿಜೆಪಿ ಸರ್ಕಾರ 9 ಲಕ್ಷ ಕುಟುಂಬಕ್ಕೆ ವೃದ್ಧಾಪ್ಯ, ವಿಧವಾ ವೇತನ ರದ್ದುಗೊಳಿಸಿದೆ. ಅದನ್ನು ಸರಿಪಡಿಸಬೇಕಿದೆ. 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕಾರ್ಯಕ್ರಮ ರೂಪಿಸಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಿಸಿದರು.
ಅಭ್ಯರ್ಥಿ ಎಂ.ವಿ.ವೀರಭದ್ರಯ್ಯ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಆರ್. ಹುಲಿನಾಯ್ಕರ್, ಮುಖಂಡ ಜಿ.ಜೆ.ರಾಜಣ್ಣ, ಸತ್ಯಪ್ರಕಾಶ್, ಮಾಜಿ ಶಾಸಕ ಗಂಗಹನುಮಯ್ಯ, ಬಿ.ವಿ.ನಾಗರಾಜು, ಬಿ.ನಾಗೇಶಬಾಬು, ಕೆ.ಎಸ್.ಪಿ.ರೆಡ್ಡಿ, ಲಕ್ಷ್ಮೀನಾರಾಯಣ, ಚೌಡರೆಡ್ಡಿ, ಅಲ್ಲಾಭಕ್ಷ್, ಷಫೀ ಅಹಮದ್, ಕುಸುಮಾ ಇನ್ನು ಅನ್ಷ್ಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ನಾಗೇಶಬಾಬು ಸ್ವಾಗತಿಸಿ ನವೀನ್ ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಕೆಎಸ್‌ಪಿ ರೆಡ್ಡಿ, ಲಕ್ಷ್ಮೀನಾರಾಯಣ ಇನ್ನು ಅನೇಕರು ಕುಮಾರಸ್ವಾಮಿ ಸಮ್ಮುಖದಲ್ಲಿ ಬಿಜೆಪಿ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು.