ಕ್ಷೇತ್ರದಲ್ಲಿ 889 ಕೋಟಿ ಅಭಿವೃದ್ಧಿ: ಸುರೇಶ್‌ಗೌಡ
ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ 889 ಕೋಟಿ ಅನುದಾನದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಶಾಸಕ ಹಾಗೂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್‌ಗೌಡ ತಿಳಿಸಿದ್ದಾರೆ.
ಅವರು ಹಿರೇಹಳ್ಳಿಯಲ್ಲಿ ಚುನಾವಣಾ ಪ್ರಚಾರ ಕಾರ್ಯದ ಬಳಿಕ ಮಾತನಾಡಿದರು. ಹಿರೇಹಳ್ಳಿ ಗ್ರಾಮಕ್ಕೆ ಮೈದಾಳ ಕೆರೆಯಿಂದ ಕುಡಿಯುವ ನೀರು ಹರಿಸುವ ಯೋಜನೆ ಅನುಷ್ಠಾನಗೊಳಿಸಿದ್ದು, ಇಲ್ಲಿನ ಕೈಗಾರಿಕಾ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ. ಈ ಭಾಗದ ರೈತರ ಮಕ್ಕಳಿಗೆ ತುಂಬಾ ಒಳ್ಳೆಯ ಉದ್ಯೋಗ, ಉತ್ತಮ ಸಂಬಳ ದೊರೆಯಲಿದ್ದು, ಗ್ರಾಮಾಂತರ ಕ್ಷೇತ್ರದ ಜನತೆ ನೆಮ್ಮದಿ ಬದುಕನ್ನು ಕಾಣಬೇಕು ಎಂಬ ಮಹದಾಸೆ ಇದೆ ಎಂದರು.
ತಾವು ಕ್ಷೇತ್ರದಲ್ಲಿ ಹಗಲಿರುಳು ಕೆಲಸ ಮಾಡಿದ್ದು, ಜನತೆ ಅಭಿವೃದ್ಧಿಗೆ ಮತ ನೀಡುತ್ತಾರೆಯೇ ಹೊರತು ಪೊಳ್ಳು ಭರವಸೆ ನೀಡುವ ರಾಜಕಾರಣಿಗಳಿಗಲ್ಲ ಎಂದರು. ರಸ್ತೆಯಲ್ಲಿ ನಿಂತು ಅಡ್ಡಾದಿಡ್ಡಿಯಾಗಿ ಹಣ ನೀಡಿ, ಯುವಕರಿಗೆ ಮದ್ಯ ಕುಡಿಸಿಕೊಂಡು ದಾರಿ ತಪ್ಪಿಸುತ್ತಿರುವ ರಾಜಕಾರರಣಿಗಳ ಬಗ್ಗೆ ಎಚ್ಚರದಿಂದ ಇರಬೇಕೆಂದರು. ಈ ಕ್ಷೇತ್ರವನ್ನು ರಾಷ್ಟ್ರದಲ್ಲೇ ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಲು ಸಂಕಲ್ಪ ಮಾಡಿದ್ದೇನೆ. ಇದಕ್ಕೆ ಪೂರಕವಾಗಿ ತಮ್ಮೆಲ್ಲರ ಸಹಕಾರ ಇರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಹದೇವ, ಹುಚ್ಚಪ್ಪ, ನರಸಿಂಹಯ್ಯ, ಗ್ರಾಪಂ ಸದಸ್ಯರು ಮತ್ತು ನೂರಾರು ಜನ ಉಪಸ್ಥಿತರಿದ್ದರು.