ಸಾಮಾನ್ಯಜ್ಞಾನ, ಸಂಸ್ಕಾರ ನೀಡದ ಶಿಕ್ಷಣದಿಂದ ಯಾವುದೇ ಪ್ರಯೋಜನವಿಲ್ಲ: ಪ್ರೊ. ಎಚ್ಸೆಸ್ಸೆಲ್
ಕನ್ನಡಪ್ರಭ ವಾರ್ತ್ಣೆ ತುಮಕೂರು , ಏ.22
ಸಾಮಾನ್ಯಜ್ಞಾನ, ಸಂಸ್ಕಾರ ನೀಡದ ಶಿಕ್ಷಣದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಬೆಂಗಳೂರು ವಿವಿ ಪುರಂ ಕಾಲೇಜಿನ ಪ್ರೊ.ಎಚ್.ಎಸ್. ಲಕ್ಷ್ಮೀನಾರಾಯಣ ಭಟ್ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಶ್ರೀದೇವಿ ಪದವಿ ಕಾಲೇಜು ವತಿಯಿಂದ ಏರ್ಪಾಟಾಗಿದ್ದ ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಶ್ರೀ ಸೃಷ್ಟಿ - 2013 ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು, ಶ್ರದ್ಧೆ, ನಿಷ್ಠೆ, ಆಸಕ್ತಿಯಿಂದ ವಿದ್ಯಾರ್ಜನೆಯಲ್ಲಿ ತೊಡಗಬೇಕು. ಪಠ್ಯದ ಜತೆಗೆ ಜೀವನದ ಪಾಠವನ್ನು ಕಲಿಸುವ ಶಿಕ್ಷಣವು ಮುಖ್ಯವಾಗಿ ಇಂದಿನ ಯುವ ಪೀಳಿಗೆಗೆ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾದುದು. ಪ್ರಾಮಾಣಿಕವಾದ ಬೋಧನೆ ಹಾಗೂ ನಿರಂತರ ಕಲಿಕೆಯಿಂದ ವ್ಯಕ್ತಿತ್ವ ವಿಕಸನ ಹೊಂದಲು ಸಾಧ್ಯ ಎಂದರು.
ಜೀವನದಲ್ಲಿ ಎದುರಾಗುವ ಹಲವು ಸವಾಲುಗಳನ್ನು ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ, ಸ್ವಂತ ಪ್ರಯತ್ನದಿಂದ ಎದುರಿಸಿ ಭವಿಷ್ಯದ ಬದುಕನ್ನು ಹಸನಾಗಿಸಿಕೊಳ್ಳುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರೊ. ಲಕ್ಷ್ಮೀನಾರಾಯಣಭಟ್ಟ, ಏಕಲವ್ಯ ಪ್ರಶಸ್ತಿ ವಿಜೇತ ಮಹದೇವಗೌಡ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಶ್ರೀದೇವಿ ಚಾರಿಟಬಲ್ ಟ್ರಸ್ಟ್‌ನ ಸದಸ್ಯರೂ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರೂ ಆದ ಗಂಗಾಧರ ಕೊಡ್ಲಿಯವರು ವಹಿಸಿದ್ದರು. ಸಮಾರಂಭದಲ್ಲಿ ಪ್ರಿನ್ಸಿಪಾಲ್ ಪ್ರೊ. ಆರ್.ಜಿ. ಶ್ರೀನಿವಾಸ್, ಪ್ರೊ. ಡಿ. ರಾಮಪ್ಪ, ಆಡಳಿತಾಧಿಕಾರಿಗಳಾದ ಬ್ರಹ್ಮದೇವಯ್ಯ, ಪ್ರೊ. ತ್ಯಾಗರಾಜು, ಪ್ರೊ. ನಾಗರಾಜರಾವ್, ಸಂಚಾಲಕರಾದ ಭೂನಳ್ಳಿ ಶ್ರೀನಿವಾಸ್, ಸುರೇಂದ್ರ ಇತರರು ಹಾಜರಿದ್ದರು.