ಅಕ್ರಮ ಮಾನವ ಸಾಗಾಣಿಕೆ ಪತ್ತೆ: ಪೊಲೀಸರಿಂದ 79 ಜನರ ರಕ್ಷಣೆ
ಕ.ಪ್ರ.ವಾರ್ತೆ , ತುಮಕೂರು , ಏ.23
ಕೆಲಸದ ಅಮಿಷ ತೋರಿಸಿ ಅಕ್ರಮ ಮಾನವ ಸಾಗಾಣೆ ಮಾಡುತ್ತಿದ್ದ ನಾಲ್ವರನ್ನು ಸರಕಾರೇತರ ಸಂಸ್ಥೆಯೊಂದರ ಸಹಕಾರದೊಂದಿಗೆ ಪಾವಗಡ ಪೊಲೀಸರು 42 ಮಹಿಳೆಯರು,16 ಹುಡುಗರು ಹಾಗೂ 21 ಪೋಷಕರನ್ನು ರಕ್ಷಿಸಿದ್ದಾರೆ.
ಬೆಂಗಳೂರಿನ ಓಯಸಿಸ್ ಎಂಬ ಎನ್.ಜಿ.ಓ ಸಂಸ್ಥೆ ನಿರ್ದೇಶಕಿ ಅನಿತಾ ಕನ್ನಯ್ಯ ನವರು ನೀಡಿದ ಖಚಿತ ಮಾಹಿತಿ ಮೇರೆಗೆ ಪಾವಗಡ ಠಾಣಾ ಪೊಲೀಸರು ಪಾವಗಡ ತಾಲೂಕಿನ ಹಿಂದೂಪುರ ರಸ್ತೆಯಲ್ಲಿ ಸಂಚರಿಸುತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಕ್ರೂಸರ್ ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಎರಡು ವಾಹನಗಳಿಂದ 42 ಹುಡುಗಿಯರು, 16 ಹುಡುಗರು ಹಾಗೂ ಸುಮಾರು 21 ಪೋಷಕರನ್ನು ಹಣ ಮತ್ತು ಕೆಲಸದ ಆಮಿಷವೊಡ್ಡಿ ತಮಿಳುನಾಡು ಮೂಲದ ಆರ್.ಗೋವಿಂದರಾಜು, ವಿ.ಸುಬ್ರಮಣ್ಯಂ, ಕೆ.ಕಾಮರಾಜು ಹಾಗೂ ಆಂಧ್ರ್ರ ಪ್ರದೇಶ ಮೂಲದ ನರಸಿಂಹ ಎಂಬುವವರು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದರು ಎನ್ನಲಾಗಿದೆ. ನಾಲ್ಕು ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಅವರ ವಿರುದ್ದ ಐಪಿಸಿ ಕಲಂ 370(3),(5) ಮತ್ತು 370(ಎ) ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಎ.ಎಸ್.ಪಿ. ಹನುಮಂತರಾಯಪ್ಪ, ಮಧುಗಿರಿ ಡಿವೈಎಸ್ಪಿ ಡಾ.ಎಸ್.ಕೆ. ಸೌಮ್ಯಲತಾ ಮಾರ್ಗದರ್ಶನದಲ್ಲಿ ಪಾವಗಡ ಸಿಪಿಐ ಭಾನುಪ್ರಸಾದ್, ಡಿಸಿಐಬಿ ವಿಭಾಗದ ಪಿಎಸ್ಐ ರವಿಕುಮಾರ್ ಮತ್ತಿತರರು ಭಾಗವಹಿಸಿ ಅಕ್ರಮವಾಗಿ ಸಾಗಾಣಿಕೆಯಾಗುತ್ತಿದ್ದ ಬಾಲಕ, ಬಾಲಕಿಯರನ್ನು ರಕ್ಷಿಸಿದ್ದಾರೆ.