'ಅಭಿವೃದ್ಧಿ ಕಾಮಗಾರಿ ಅನುಷ್ಠಾನ'
ಕ.ಪ್ರ. ವಾರ್ತೆ ಶಿರಾ:್ಣ ಏ.23
ಅಭಿವೃದ್ಧಿ ಮರಿಚಿಕೆಯಾಗಿದ್ದ ಹುಲಿಕುಂಟೆ ಹೋಬಳಿಯನ್ನು 150 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸಿದ್ದೇನೆ ಎಂದು ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.
ಅವರು ತಾಲೂಕಿನ ಹುಲಿಕುಂಟೆ ಹೋಬಳಿಯ ತಡಕಲೂರು ಗ್ರಾ.ಪಂ. ವ್ಯಾಪ್ತಿಯ ಲಕ್ಕನಹಳ್ಳಿ ಗ್ರಾಮದಲ್ಲಿ ಮತಯಾಚನೆ ಸಂದರ್ಭದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.
ಚಿರತಹಳ್ಳಿ, ದ್ವಾರನಕುಂಟೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೂತನ ಕಟ್ಟಡ, ತಡಕಲೂರು ಹಾಗೂ ನೇಜಂತಿ ಕೆರೆ ಹಳ್ಳಕ್ಕೆ ಕೇಂದ್ರ ಸರ್ಕಾರದ ಅನುದಾನದಲ್ಲಿ ಜಲಾನಯನ ಪ್ರದೇಶ ಅಭಿವೃದ್ಧಿಗೆ 12 ಕೋಟಿ, ಬರಗೂರಿನಲ್ಲಿ ಗಡಿನಾಡ ಭವನ, ಚೌಳರಹಟ್ಟಿ, ಕುರುಬರ ರಾಮನಹಳ್ಳಿ, ಕಾಟನಹಳ್ಳಿ ಸೇರಿದಂತೆ ಪ್ರಧಾನ ಮಂತ್ರಿ ಗ್ರಾಮ ಸಡಕ್‌ಯೋಜನೆಯಲ್ಲಿ ಸಂಪರ್ಕ ರಸ್ತೆ, ಕರಿದಾಸರಹಳ್ಳಿ ದ್ವಾರನಕುಂಟೆ, ಹಾರೋಗೆರೆ ಸೇರಿದಂತೆ ರಸ್ತೆ ಅಭಿವೃದ್ಧಿಗೆ 8 ಕೋಟಿ ಮಂಜೂರು ಮಾಡಿಸಿ ಹೋಬಳಿಯನ್ನು ಅಭಿವೃದ್ದಿ ಪಡಿಸಿದ್ದೇನೆ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ನನ್ನ ರಾಜಕೀಯ ಜೀವನದ ಮಹತ್ವಾಕಾಂಕ್ಷೆ ಯೋಜನೆಯಾದ ಮದಲೂರು-ಧರ್ಮಪುರ ಕೆರೆ ಯೋಜನೆ ಅನುಷ್ಠಾನಗೊಳಿಸಿ ಹೋಬಳಿಯನ್ನು ಸಂಪೂರ್ಣ ನೀರಾವರಿ ಪ್ರದೇಶವನ್ನಾಗಿ ಮಾಡುತ್ತೇನೆ ಎಂದರು.
ಮತಯಾಚನೆ ಸಂದರ್ಭದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂಗಾವರ ಮಾರಣ್ಣ, ನಗರ ಅಧ್ಯಕ್ಷ ಅಲ್ಲಾಭಕ್ಷ್ ಪ್ಯಾರು, ಎ.ಪಿ.ಎಂ.ಸಿ. ನಿರ್ದೆಶಕ ಅಜ್ಜೇಗೌಡ, ಡಿ.ಸಿ.ಸಿ. ಬ್ಯಾಂಕ್ ನಿರ್ದೆಶಕ ಜಿ.ಎ.ಸಿ.ರವಿ, ಮುಖಂಡರಾದ ದೊಡ್ಡಸಿದ್ದಪ್ಪ, ಹಲಗುಂಡೇಗೌಡ, ಮಾಜಿ ಜಿ.ಪಂ. ಸದಸ್ಯ ಪಿ.ಆರ್.ಮಂಜುನಾಥ್, ಕಾಂಗ್ರೆಸ್ ವಕ್ತಾರ ಡಿ.ಸಿ.ಅಶೋಕ್, ಮಾಜಿ ತಾ.ಪಂ. ಉಪಾಧ್ಯಕ್ಷ ಕೆ.ನರಸಪ್ಪ ಮತ್ತಿತರರು ಹಾಜರಿದ್ದರು.