ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದ್ಯಾರ್ಥಿಗಳಿಗೆ ಸಕ್ರಿಯ ರಾಜಕಾರಣ ಬೇಡ

Vishwanath S
Updated On : 25 Apr 2013, 12:32 pm

ಕ.ಪ್ರ. ವಾರ್ತೆ  ,   ತುಮಕೂರು  ,   ಏ.24
ವಿದ್ಯಾರ್ಜನೆ ಹಾಗೂ ಜ್ಞಾನ ಸಂಪಾದನೆ ವಿದ್ಯಾರ್ಥಿಗಳ ಪರಮಧ್ಯೇಯವಾಗಿರಬೇಕು. ವಿದ್ಯಾರ್ಥಿ ಜೀವನ ಮುಗಿಯುವವರೆಗೂ ಅವರಿಗೆ ಸಕ್ರಿಯ ರಾಜಕಾರಣ ಸಲ್ಲದು ಎಂದು ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದಜೀ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಇಂಡಾಲಜಿ (ಭಾರತೀಯಶಾಸ್ತ್ರ) ಅಧ್ಯಯನ ಕೇಂದ್ರ ಹಾಗೂ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸಹಭಾಗಿತ್ವದಲ್ಲಿ ವಿ.ವಿ. ಆವರಣದಲ್ಲಿ ಬುಧವಾರ  ನಡೆದ ಯುಗಪುರುಷ ಸ್ವಾಮಿ ವಿವೇಕಾನಂದ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಯಾವ ರಾಜಕೀಯ ಪಕ್ಷದೊಂದಿಗೂ ಗುರುತಿಸಿಕೊಳ್ಳುವ ಅವಶ್ಯಕತೆಯಿಲ್ಲ. ವಿದ್ಯಾರ್ಥಿ ಜೀವನದಲ್ಲೇ ರಾಜಕಾರಣಿಗಳ ಹಿಂದೆ ಹೋಗಿಬಿಟ್ಟರೆ ಜೀವನದ ನೈಜ ಗುರಿಗಳನ್ನು ಸಾಧಿಸಲಾಗದು ಎಂದು ಸ್ವಾಮೀಜಿ ಎಚ್ಚರಿಸಿದರು.
ಸಮಾಜದ ತುಂಬೆಲ್ಲ ಅನೈತಿಕ ಘಟನೆಗಳು ಹೆಚ್ಚಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ  ಅವರು, ಭಾರತ ಈ ಶೋಚನೀಯ ಪರಿಸ್ಥಿತಿಯಿಂದ ಮೇಲೇಳಬೇಕಾದರೆ ವಿವೇಕಾನಂದರ ಆದರ್ಶಗಳನ್ನು ಪಾಲಿಸುವುದೊಂದೇ ಉಳಿದಿರುವ ಮಾರ್ಗ ಎಂದರು.
ಮನುಷ್ಯ ಸರಿಹೋದರೆ ಪ್ರಪಂಚ  ಪೂರ್ತಿ ಸರಿಹೋಗುತ್ತದೆ ಎಂಬುದು ವಿವೇಕಾನಂದರ ವಿಚಾರಧಾರೆಯಾಗಿತ್ತು. ಇದನ್ನು ಒಬ್ಬೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿ ಬಿತ್ತುವುದೇ ಇಂದಿನ ಶಿಕ್ಷಣ ಪದ್ಧತಿಯ ಉದ್ದೇಶವಾಗಬೇಕು ಎಂದರು.
ದೇಶ ಬೇಕು: ಯುವಕರಿಗೆ ಶಿಕ್ಷಣ ಕೊಟ್ಟು ಸೂಕ್ತ ಅರ್ಹತೆ ಸಂಪಾದಿಸಿಕೊಳ್ಳಲು ದೇಶ ಬೇಕು. ಉದ್ಯೋಗಕ್ಕಾಗಿ ಅವರು ಪರದೇಶಗಳನ್ನು ಅವಲಂಬಿಸುತ್ತಾರೆ. ಈ ಬೆಳವಣಿಗೆ ಒಳ್ಳೆಯದಲ್ಲ. ದೇಶದಿಂದ ಪಡೆದುಕೊಂಡುದಕ್ಕೆ ಪ್ರತಿಯಾಗಿ ತಮ್ಮ ಸೇವೆಯನ್ನು ಇದೇ ದೇಶಕ್ಕೆ ಮೀಸಲಿಡುವುದು ಯುವಕರ ಕರ್ತವ್ಯ ಎಂದರು.
ಸ್ವಾಮಿ ವಿವೇಕಾನಂದರ ತತ್ತ್ವಗಳ ಹಿನ್ನೆಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ಕ್ಷೇತ್ರದ ಅವಶ್ಯಕತೆಗಳು ಎಂಬ ವಿಷಯದ ಬಗ್ಗೆ ಮಾತನಾಡಿದ ದೆಹಲಿಯ ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ಶಾಂತಾತ್ಮಾನಂದಜೀಯವರು, ಧಾರ್ಮಿಕ ಸಾಮರಸ್ಯ ಇಂದಿನ ಶಿಕ್ಷಣ ಪದ್ಧತಿಯ ಅವಿಭಾಜ್ಯ ಅಂಗವಾಗಬೇಕು ಎಂದರು.
ಕೋಮು ಸಾಮರಸ್ಯದ ಕೊರತೆ: ಪ್ರಸ್ತುತ ದಿನಗಳಲ್ಲಿ ಸಮಾಜದ ಎಲ್ಲೆಡೆ ಕೋಮು ಸಾಮರಸ್ಯದ ಕೊರತೆ ಎದ್ದುಕಾಣುತ್ತಿದೆ. ಇದನ್ನು ಸರಿಹೊಂದಿಸುವ ಶಿಕ್ಷಣ ಪದ್ಧತಿ ಬೇಕಾಗಿದೆ ಎಂದರು.
ಮನುಷ್ಯನಲ್ಲಿ ಈಗಾಗಲೇ ಇರುವ ಪರಿಪೂರ್ಣತೆಯನ್ನು ಸಂಪೂರ್ಣವಾಗಿ ಪ್ರಕಟಗೊಳ್ಳುವಂತೆ ಮಾಡುವುದೇ ಶಿಕ್ಷಣದ ಉದ್ದೇಶವಾಗಬೇಕು ಎಂಬುದು ವಿವೇಕಾನಂದರ ಆಶಯವಾಗಿತ್ತು.
 ಮಗುವಿನ ಆಸಕ್ತಿ, ಅಭಿರುಚಿಯನ್ನು ಅರ್ಥ ಮಾಡಿಕೊಂಡು ಅದನ್ನು ಉಜ್ವಲ ಭವಿಷ್ಯದತ್ತ ಮುನ್ನಡೆಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದರು.
ಲೋಕಾರ್ಪಣೆ: ಇದೇ ಸಂದರ್ಭ ತುಮಕೂರು ವಿ.ವಿ. ಪ್ರಸಾರಾಂಗ ಪ್ರಕಟಿಸಿದ ಡಾ. ವೀರೇಶಾನಂದ ಸರಸ್ವತಿಯವರ ಸ್ವಾಮಿ ವಿವೇಕಾನಂದ ಮತ್ತು ಮಾನವ ಅಭ್ಯುದಯ ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್. ಸಿ. ಶರ್ಮಾ ಸ್ವಾಗತಿಸಿದರು.
 ಕುಲಸಚಿವ ಪ್ರೊ. ಡಿ. ಶಿವಲಿಂಗಯ್ಯ ವಂದಿಸಿದರು. ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ. ವೀರೇಶಾನಂದ ಸರಸ್ವತಿಯವರು ಸಂದೇಶ ವಾಚಿಸಿದರು.
ಸಮಾರಂಭದಲ್ಲಿ ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಹಿರಿಯ ಯತಿ ಸ್ವಾಮಿ ಜಗದಾತ್ಮಾನಂದಜಿ, ಕುಲಸಚಿವ (ಮೌಲ್ಯಮಾಪನ) ಎನ್. ಲಕ್ಷ್ಮೀಕಾಂತ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement