ತರಕಾರಿ ನಾಗರಾಜು, ಆರ್.ಡಿ. ಬಾಬು ಕೆಜೆಪಿಗೆ ಸೇರ್ಪಡೆ
ತಿಪಟೂರು: ತಾಲೂಕು ಅಹಿಂದ ಮುಖಂಡ, ತಾಲೂಕು ಯಾದವ ಸಂಘದ ಅಧ್ಯಕ್ಷ ಹಾಗೂ ಮಾಜಿ ನಗರಸಭಾ ಉಪಾಧ್ಯಕ್ಷ ತರಕಾರಿ ಎಂ. ನಾಗರಾಜು ಹಾಗೂ ಮಾಜಿ ನಗರಸಭಾಧ್ಯಕ್ಷ, ಬಿಜೆಪಿ ಮುಖಂಡ ಆರ್.ಡಿ.ಬಾಬು ಮತ್ತು ಇವರ ಸಹೋದರ ನಗರಸಭಾ ಮಾಜಿ ಸದಸ್ಯ ಆರ್.ಡಿ. ಗಿರೀಶ್ ಸೇರಿದಂತೆ ಮತ್ತಿತರರು ಲೋಕೇಶ್ವರವರ ಸಮ್ಮುಖದಲ್ಲಿ ಕೆಜೆಪಿಗೆ ಸೇರ್ಪಡೆಯಾದರು. ಈ ವೇಳೆ ತರಕಾರಿ ಎಂ.ನಾಗರಾಜು ಮಾತನಾಡಿ ತಾಲೂಕಿನಲ್ಲಿ ಅಹಿಂದ ಸಂಘಟನೆಯನ್ನು ಕಟ್ಟಿ ಬೆಳೆಸಿದ ನನಗೆ ಕಾಂಗ್ರೆಸ್ ಸೂಕ್ತ ಸ್ಥಾನ ನೀಡಲಿಲ್ಲಿ. ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕ್ಷೇತ್ರದ ಅಭ್ಯರ್ಥಿ ಲೋಕೇಶ್ವರ ಅವರ ನಾಯಕತ್ವ ಗುಣಗಳನ್ನು ಮೆಚ್ಚಿ ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದರು. ತರಕಾರಿ ಹರೀಶ್, ಜೆಡಿಎಸ್ ಸೂಗೂರು ಗುರುಮೂರ್ತಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಬಸವರಾಜು ಮತ್ತಿತರರು ಕೆಜೆಪಿಗೆ ಸೇರ್ಪಡೆಯಾದರು.
ಜನತೆಯಿಂದ ಉತ್ತಮ ಬೆಂಬಲ: ಜ್ಯೋತಿ ಗಣೇಶ
ತುಮಕೂರು: ತುಮಕೂರು ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜನತೆಯಿಂದ ಉತ್ತಮ ಪ್ರತಿಕ್ರಿಯೆ ತಮಗೆ ವ್ಯಕ್ತವಾಗುತ್ತಿದೆ ಎಂದು ಕೆಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ತಿಳಿಸಿದ್ದಾರೆ. ಅವರು ತುಮಕೂರು ಶಿರಾಗೇಟ್ ಕನಕ ವೃತ್ತದ ಬಳಿ ಚುನಾವಣಾ ಪ್ರಚಾರದಲ್ಲಿ ನೆರದಿದ್ದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದರು. ನಗರದ ನಾಗರಿಕರು ಬದಲಾವಣೆಯನ್ನು ಬಯಸಿದ್ದಾರೆ. ಯುವ ಜನತೆಯು ಸ್ವಪ್ರೇರಣೇಯಿಂದ ಚುನಾವಣೆಯ ಪ್ರಚಾರದಲ್ಲಿ ನನ್ನ ಜೊತೆ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದರು. 35ನೇ ವಾರ್ಡ್ ದೇವರಾಯಪಟ್ಟಣ್ಣದಲ್ಲಿ ಕೆಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ, ಎಂ.ಎಸ್. ಕಲ್ಲೇಶಪ್ಪನವರು ( ಹಿರಿಯ ಗೌರವ ಉಪಾಧ್ಯಕ್ಷರು) ಸಮ್ಮುಖದಲ್ಲಿ ಡಿ.ಆರ್. ಬಸವರಾಜು ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು, ವೆಂಕಟಚಲಪ್ಪ, ರಾಜಣ್ಣ, ರಂಗನಾಥ್, ಪ್ರಕಾಶ್ ಮೂರ್ತಿ, ದಯಾನಂದ್, ರಮೇಶ್, ಸುರೇಶ್, ಉಮೇಶ್ ಮುಂತಾದವರು ಕೆಜೆಪಿಗೆ ಸೇರ್ಪಡೆಯಾದರು.
ಕರಿಯಮ್ಮ ದೇವಿ ಜಾತ್ರೆಗೆ ಚಾಲನೆ
ಹುಳಿಯಾರು: ಹೋಬಳಿ ಚಿಕ್ಕಬಿದರೆ ಗ್ರಾಮದ ಏಳುಹಳ್ಳಿ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವವು ಗುರುವಾರ ಧ್ವಜಾರೋಹಣ, ಕಂಕಣಧಾರಣೆ, ಮಧುವಣಗಿತ್ತಿ ಸೇವಾ ಕಾರ್ಯದೊಂದಿಗೆ ಚಾಲನೆಗೊಂಡಿದೆ.
'ಜೆಡಿಎಸ್ ಪರ ಒಲವು'
ಶಿರಾ: ಕಳೆದ 5 ವರ್ಷದಿಂದ ತಾಲೂಕಿನ ಹುಲಿಕುಂಳಟೆ ಹೋಬಳಿಯನ್ನು ಶಾಸಕರು ನಿರ್ಲಕ್ಷಿಸಿದ್ದು ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು ಮತದಾರರು ಕಾಂಗ್ರೆಸ್ಅನ್ನು ತಿರಸ್ಕರಿಸಿ ಜೆಡಿಎಸ್ ಪರ ಒಲವು ಹೊಂದಿದ್ದಾರೆ ಎಂದು ಮಾಜಿ ಸಚಿವ ಬಿ.ಸತ್ಯನಾರಾಯಣ ತಿಳಿಸಿದರು. ಅವರು ತಾಲೂಕಿನ ಬೆಜ್ಜಿಹಳ್ಳಿ, ಚಿರತಹಳ್ಳಿ, ಲಕ್ಕನಹಳ್ಳಿ, ತಡಕಲೂರು ಗ್ರಾಮಗಳಲ್ಲಿ ಮತ ಪ್ರಚಾರ ಕೈಗೊಂಡು ಮಾತನಾಡಿ ಮಳೆ ಇಲ್ಲದೆ ಬೆಳೆಯೂ ಇಲ್ಲದೆ ಕಂಗಾಲಾಗಿರುವ ರೈತ ಸಾಲಬಾದೆಯಿಂದ ನರಳುತ್ತಿದ್ದು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದರೆ ರೈತರ ಸಂಪೂರ್ಣ ಸಾಲ ಮನ್ನ ಮಾಡಿಸುವೆ ಎಂದರು. ಜಿ.ಪಂ. ಮಾಜಿ ಉಪಾಧ್ಯಕ್ಷ ಗಡಾರಿ ಹನುಮಂತಪ್ಪ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಜೆಡಿಎಸ್ ಅಲೆ ಇದ್ದು ಬಿ.ಸತ್ಯನಾರಾಯಣ ಗೆಲವು ಖಚಿತ ಎಂದರು. ಜೆಡಿಎಸ್ನ ಪ್ರಕಾಶ ಗೌಡ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿ ಹಣವಂತರಾಗಿದ್ದು, ಅವರ ಹಣದ ಆಸೆಗೆ ಬಲಿಯಾಗದೆ ಬಿ.ಸತ್ಯನಾರಾಯಣ ಅವರನ್ನು ಆಯ್ಕೆ ಮಾಡಬೇಕೆಂದು ತಿಳಿಸಿದರು.