ಬಿಸಿಲು ಲೆಕ್ಕಿಸದೇ ಮನೆ ಮನೆಗೆ ತೆರಳಿ ಮತಯಾಚನೆ
ಕ.ಪ್ರ.ವಾರ್ತ್ಣೆ ಪಾವಗಡ ಏ.25
ಪಾವಗಡ ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಉರಿ ಬಿಸಿಲು ಲೆಕ್ಕಿಸದೇ ಮನೆ ಮನೆ ಮತಯಾಚನೆಯಲ್ಲಿ ನಿರತರಾಗಿ ಚುನಾವಣೆ ಕಾವು ದಿನೇ ದಿನೇ ರಂಗೇರುತ್ತಿದೆ.
ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ಪಾವಗಡ ಸದಾ ಬರಕ್ಕೆ ತುತ್ತಾಗಿದೆ.
ರಾಜ್ಯದಲ್ಲಿ ಜನತಾ ಪರಿವಾರ ಅಸ್ತಿತ್ವಕ್ಕೆ ಬಂದ ನಂತರ ಇಲ್ಲಿ ಕೂಡ ಜನತಾ ಪರಿವಾರದ ಸೋಮ್ಲಾನಾಯಕ್ ಶಾಸಕರಾದರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ದೊರೆಯದ ಕಾರಣ ಬಂಡಾಯದಿಂದ ಸ್ವರ್ಧಿಸಿದ್ದ ವೆಂಕಟರಮಣಪ್ಪ ಗೆದ್ದರು.
ಯವಕರಿಗೆ ಆದ್ಯತೆ: ಯುವಕರಿಗೆ ಆದ್ಯತೆ ಕಲ್ಪಿಸುವ ಹಿನ್ನೆಲೆಯಲ್ಲಿ ಈ ಬಾರಿ ವೆಂಕಟರಮಣಪ್ಪ ಚುನಾವಣೆಯಿಂದ ದೂರ ಸರಿದಿದ್ದು ತಮ್ಮ ಪುತ್ರ ಎಚ್.ವಿ.ವೆಂಕಟೇಶ್ ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸಿದ್ದಾರೆ. ಜೆಡಿಎಸ್‌ನಿಂದ ಕೆ.ಎಂ.ತಿಮ್ಮರಾಯಪ್ಪ, ಬಿಜೆಪಿಯಿಂದ ಗುಜ್ಜನಡು ವಿಜಯ್‌ರಾಜ್ ಸ್ವರ್ಧಿಸಿದ್ದಾರೆ. ಕೆಜೆಪಿಯಿಂದ ಪಾವಗಡ ಶ್ರೀರಾಮ್, ಬಿಎಸ್‌ಆರ್‌ನಿಂದ ಮಾಜಿ ಶಾಸಕ ಉಗ್ರನರಸಿಂಹಪ್ಪ, ಬಿಎಸ್‌ಪಿಯಿಂದ ನಾಗರತ್ನಮ್ಮ ಜೆಡಿಯುನಿಂದ ಗೋಪಾಲನಾಯಕ್, ರಾಷ್ಟ್ರೀಯವಾದಿ ಕಾಂಗ್ರೆಸ್‌ನಿಂದ ಸೇವಾನಾಯ್ಕ್, ಪಕ್ಷೇತರರಾಗಿ ಮದ್ದೇಟಪ್ಪ ಹನುಮಂತರಾಯಪ್ಪ ಸೇರಿದಂತೆ ಅಂತಿಮವಾಗಿ ಒಟ್ಟು 13ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಸ್ವರ್ಧಿಸಿರುವ ಎಚ್.ವಿ.ವೆಂಕಟೇಶ್ ಯುವಕರಾಗಿದ್ದು ಕಳೆದ 6 ತಿಂಗಳಿಂದ ಗ್ರಾಮಗಳಿಗೆ ತೆರಳಿ ಯುವಕರ ಪಡೆಯನ್ನೇ ಕಟ್ಟಿದ್ದಾರೆ. ಅಲ್ಲದೇ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಮೂಲಕ ಪಕ್ಷ ಪ್ರಬಲವಾಗಿ ಸಂಘಟಿಸುತ್ತಿದ್ದು ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಅವರಿಗೆ ವರದಾನದ ಸಾಧ್ಯತೆಗಳಿವೆ.
ಕಾರ್ಯಕರ್ತರ ಉತ್ಸಾಹ: ಜೆಡಿಎಸ್‌ನಿಂದ ಸ್ವರ್ಧಿಸಿದ ಕೆ.ಎಂ. ತಿಮ್ಮರಾಯಪ್ಪ ಅವರ ವ್ಯಕ್ತಿತ್ವದ ಬಗ್ಗೆ ಉತ್ತಮ ಅಭಿಪ್ರಾಯ ಕೇಳಿಬರುತ್ತಿದ್ದು ದಲಿತರು, ಪಕ್ಷದ ಮುಖಂಡರು ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ.
ಬಿಜೆಪಿಯಿಂದ ಸ್ವರ್ಧಿಸಿದ ವಿಜಯ್‌ರಾಜ್ ಪಕ್ಷದ ಮುಖಂಡರೊಂದಿಗೆ ಮತಯಾಚನೆಯಲ್ಲಿ ನಿರತರಾಗಿದ್ದು ಹೊಸ ಮುಖ ಮತ ನೀಡಿ ಎಂದು ಮನವಿ ಮಾಡುತ್ತಿದ್ದಾರೆ. ಕೆಜೆಪಿ ಅಭ್ಯರ್ಥಿ ಪಾವಗಡ ಶ್ರೀರಾಮ್ ಪ್ರತಿ ಗ್ರಾಮಕ್ಕೆ ತೆರಳುವ ಮೂಲಕ ಮುಖಂಡರ ವಿಶ್ವಾಸದೊಂದಿಗೆ ಮತ ಯಾಚಿಸುತ್ತಿದ್ದಾರೆ. ಬಿಎಸ್‌ಆರ್‌ನಿಂದ ಸ್ಪರ್ಧಿಸಿದ ಉಗ್ರನರಸಿಂಹಪ್ಪ ಎಲ್ಲಾ ವರ್ಗದ ಮತಗಳನ್ನು ಸೆಳೆಯಲು ಯತ್ನ ನಡೆಸಿದ್ದಾರೆ. ಬಿಎಸ್‌ಪಿಯಿಂದ ಸ್ವರ್ಧಿಸಿದ ನಾಗರತ್ನಮ್ಮ, ಜೆಡಿಯು ಅಭ್ಯರ್ಥಿ ಗೋಪಾಲನಾಯಕ್, ರಾಷ್ರೀಯವಾದಿ ಕಾಂಗ್ರೆಸ್ ಅಭ್ಯರ್ಥಿ ಸೇವಾನಾಯ್ಕ್ ಪಕ್ಷದ ಮುಖಂಡರೊಂದಿಗೆ ಗ್ರಾಮಗಳಿಗೆ ತೆರಳಿ ಮತಯಾಚಿಸುತ್ತಿದ್ದಾರೆ. ಕಣದಲ್ಲಿರುವ ಪಕ್ಷೇತರರು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿದ್ದು ಒಟ್ಟಾರೆ ಮೇಲ್ನೋಟಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ನೇರ ಹಣಾಹಣಿ ಇದೆ.