ಸುಳ್ಳು ಮಾಹಿತಿ ನೀಡಿ ವಿಆರ್ಎಸ್ ಪಡೆದ ವೀರಭದ್ರಯ್ಯ: ಆರೋಪ
ತುಮಕೂರು: ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಸ್ವಯಂ ನಿವೃತ್ತಿ ಪಡೆದು ಮಧುಗಿರಿ ಜೆಡಿಎಸ್ ಅಭ್ಯರ್ಥಿಯಾಗಿ ವೀರಭದ್ರಯ್ಯ ಸ್ಪರ್ಧಿಸುತ್ತಿರುವುದು ಕಾನೂನು ಬಾಹಿರ ಎಂದು ಮಧುಗಿರಿ ಜೆಡಿಎಸ್ ಮುಖಂಡ ಬ್ಯಾಲೇನಹಳ್ಳಿ ಶಿವಣ್ಣ ಆರೋಪಿಸಿದ್ದಾರೆ.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರ್ಕಾರಿ ಭೂಮಿ ದುರ್ಬಳಕೆ ಪ್ರಕರಣದಲ್ಲಿ ನೂರಾರು ಕೋಟಿ ರು. ನಷ್ಟಕ್ಕೆ ಕಾರಣಕರ್ತರಾಗಿರುವ ವೀರಭದ್ರಯ್ಯ ಸಿಎಟಿ ನ್ಯಾಯಾಲಯದಲ್ಲಿ ಸುಳ್ಳು ಮಾಹಿತಿ ನೀಡಿ ಏಪ್ರಿಲ್ 16 ರಂದು ಸ್ವಯಂ ನಿವೃತ್ತಿ ಪಡೆದು 17 ರಂದೇ ಜೆಡಿಎಸ್ ಅಭ್ಯರ್ಥಿಯಾಗಿ ಮಧುಗಿರಿಯಲ್ಲಿ ಕಣಕ್ಕಿಳಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಲೋಕಾಯುಕ್ತ ದಾಳಿ, ಭ್ರಷ್ಟಾಚಾರ ಪ್ರಕರಣ ಇತರೆ ಆರೋಪಗಳನ್ನು ಎದುರಿಸುತ್ತಿರುವ ವೀರಭದ್ರಯ್ಯ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ವ್ಯಕ್ತಿಗೆ ಸರ್ಕಾರ ಸ್ವಯಂ ನಿವೃತ್ತಿಗೆ ಅನುಮತಿ ನೀಡಲು ಬರುವುದಿಲ್ಲ. ಆದರೆ ಏಪ್ರಿಲ್ 16 ರಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಾಜಕೀಯ ಒತ್ತಡಗಳಿಗೆ ಮಣಿದು ಸ್ವಯಂ ನಿವೃತ್ತಿಗೆ ಅನುಮತಿ ನೀಡುವುದರ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. 2012, ಸೆಪ್ಟೆಂಬರ್ 29 ರಂದು ವೀರಭದ್ರಯ್ಯ ಅವರು ಸರ್ಕಾರಿ ಭೂಮಿಯನ್ನು ದುರ್ಬಳಕೆ ಮಾಡಿದ್ದಾರೆಂದು ಸುಮಾರು 200 ಕೋಟಿ ನಷ್ಟ ಮಾಡಿದ್ದಾರೆಂದು ಎಫ್ಐಆರ್ ದಾಖಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಇವರ ಮೇಲೆ ದೋಷಾರೋಪಣ ಪಟ್ಟಿಯನ್ನು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಈ ಪ್ರಕರಣ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ. ಇಂತಹ ದೋಷಾರೋಪಣಾ ಪಟ್ಟಿ ಇರುವಾಗ ಸರ್ಕಾರಿ ಅಧಿಕಾರಿಗಳಿಗೆ ವಿಆರ್ಎಸ್ ಆಗಲಿ, ರಾಜಿನಾಮೆಯಾಗಲಿ ಅಂಗೀಕಾರ ಮಾಡಬಾರದೆಂದು ಕೇಂದ್ರ ಸರ್ಕಾರದ ಆದೇಶವಿದೆ. ಈ ಹಿಂದೆ ಈ ಮೇಲಿನ ಆದೇಶದಂತೆ ವೀರಭದ್ರಯ್ಯ ಅವರ ವಿಆರ್ಎಸ್ ವಜಾ ಆಗಿತ್ತು. ವೀರಭದ್ರಯ್ಯನವರು ಸಿಎಟಿ ಗೆ ಮೇಲ್ಮನವಿ ಸಲ್ಲಿಸಿ ಸದರಿ ಕೋರ್ಟ್ನಲ್ಲಿ ಮೇಲ್ಕಂಡ ಚಾರ್ಜ್ಶೀಟನ್ನು ಕೋರ್ಟ್ಗೆ ಸಲ್ಲಿಸದೆ ಮರೆ ಮಾಚಿದ್ದಾರೆ ಎಂದು ಆರೋಪಿಸಿದ್ದಾರೆ.