'ಪಾವಗಡ ಅಭಿವೃದ್ಧಿಗೆ ರು. 600 ಕೋಟಿ'
ಪಾವಗಡ: ಬಿಜೆಪಿ ಸರ್ಕಾರ ತಾಲೂಕು ಅಭಿವೃದ್ಧಿಗೆ 600 ಕೋಟಿ ವಿನಿಯೋಗಿಸಿದ್ದು ಎಸ್ಸಿ, ಎಸ್ಟಿ ಸೇರಿದಂತೆ ಎಲ್ಲಾ ವರ್ಗಗಳ ಸರ್ವತೋಮುಖ ಕಲ್ಯಾಣಕ್ಕೆ ಪಕ್ಷವನ್ನು ಬೆಂಬಲಿಸಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಶಿವಪ್ರಸಾದ್ ಮನವಿ ಮಾಡಿದರು. ಅವರು ಗುರುವಾರ ಸೇರ್ಪಡೆ ಹಾಗೂ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು. ಬಿಜೆಪಿ ಸರ್ಕಾರ ತಾಲೂಕು ಅಭಿವೃದ್ಧಿಗೆ ಸುಮಾರು 600ಕೋಟಿ ವಿನಿಯೋಗಿಸಿದ್ದು ಅಲ್ಪಸಂಖ್ಯಾತರ ಕಲ್ಯಾಣಕ್ಕೆ 150 ಕೋಟಿ, ಎಸ್ಸಿ, ಎಸ್ಟಿ ಜಮೀನುಗಳಲ್ಲಿ ಸುಮಾರು 600 ಕೊಳವೆ ಬಾವಿಗಳು ಮಹಿಳೆಯರ ಅರ್ಥಿಕಾಭಿವೃದ್ಧಿಗೆ ಸಾವಿರಾರು ಮಹಿಳಾ ಸ್ವಸಹಾಯಕ ಸಂಘಗಳಿಗೆ 1.50ಲಕ್ಷ ಸಹಾಯ ಧನದೊಂದಿಗೆ ಸಾಲ ಸೌಲಭ್ಯ ಹಾಗೂ ವಿವಿಧ ಯೋಜನೆ ಅಡಿಯಲ್ಲಿ ಅನೇಕ ಮಂದಿ ಬಡ ಫಲಾನುಭವಿಗಳಿಗೆ 10ಸಾವಿರ ಸಹಾಯಧನ. 70ಕೋಟಿ ವೆಚ್ಚದಲ್ಲಿ 220ಕೆ.ವಿ.ವಿದ್ಯುತ್ ಉಪಸ್ಥಾವರ ನಿರ್ಮಾಣ, ದೇವಸ್ಥಾನಗಳ ಅಭಿವೃದ್ಧಿಗೆ 10ಕೋಟಿ, ಸಮುದಾಯ ಭವನಗಳ ನಿರ್ಮಾಣಕ್ಕೆ 15 ಕೋಟಿ, ನಾಗಲಮಡಿಕೆ ಯಾತ್ರಿ ನಿವಾಸಕ್ಕೆ 1ಕೋಟಿ ವಿನಿಯೋಗಿಸಲಾಗಿದೆ ಎಂದರು.
ಹಣ ದುರುಪಯೊಗ: ರಸ್ತೆ ಡಾಂಬರೀಕರಣ ಸೇರಿದಂತೆ ವಿವಿಧ ಯೋಜನೆಗಳ ಅಭಿವೃದ್ಧಿಗೆ ಸರ್ಕಾರದಿಂದ ಕೋಟ್ಯಂತರ ರು.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ಶಾಸಕ ವೆಂಕಟರಮಣಪ್ಪ ತಮ್ಮ ಪುತ್ರರೊಬ್ಬರಿಗೆ ಗುತ್ತಿಗೆ ನೀಡುವ ಮೂಲಕ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದರು. ತಾಲೂಕಿನಲ್ಲಿ 7,214 ಮಂದಿ ಅಂಗವಿಕಲರಿದ್ದು ಕೇಂದ್ರ ಸರ್ಕಾರದ ಯೋಜನೆಗಳು ಅವರಿಗೆ ತಲುಪಿಲ್ಲ. ದಲಿತ ಹಾಗೂ ಅಲ್ಪಸಂಖ್ಯಾತರರಿಗೆ ಅನುಕೂಲ ಕಲ್ಪಿಸದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ ಭರವಸೆಗಳನ್ನು ನೀಡುವ ಮೂಲಕ ವೋಟ್ ಬ್ಯಾಂಕ್ ಮಾಡಿಕೊಂಡು ಅವರನ್ನು ಕಡೆಗಾಣಿಸಿದೆ ಎಂದರು. ಪ್ಲೋರೈಡ್ ನೀರಿನ ಸಮಸ್ಯೆ ನಿವಾರಣೆಗೆ ನದಿ ಮೂಲದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಗಮನ ಸೆಳೆಯಲು ಭದ್ರ ಮೇಲ್ದಾಂಡೆ ಹೋರಾಟ ಸಮಿತಿ ವತಿಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡ ಸಂದರ್ಭದಲ್ಲಿ ಆಂಧ್ರ ಸಂಸದರು ಸಹಕಾರ ನೀಡಿದರು. ಸೌಜನ್ಯಕ್ಕಾದರೂ ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಆಗಮಿಸಲಿಲ್ಲ. ಇಂತಹವರು ತಾಲೂಕಿನ ಅಭಿವೃದ್ಧಿ ಬಗ್ಗೆ ಮಾತನಾಡುವುದು ನಾಚಿಕೆಗೇಡು ಎಂದರು.
ಜಾಗೃತರಾಗಬೇಕು: ಮತದಾರರು ಜಾಗೃತರಾಗಬೇಕು. ಹಣ ಆಮಿಷಗಳಿಗೆ ಬಲಿಯಾಗಿ ಪವಿತ್ರ ಮತ ಕಳೆದುಕೊಳ್ಳದೇ ಬಿಜೆಪಿ ಬೆಂಬಲಿಸುವ ಮೂಲಕ ಪಕ್ಷದಿಂದ ಸ್ವರ್ಧಿಸಿದ ಸರಳ ಸಜ್ಜನಿಕೆಯ ವಿದ್ಯಾವಂತ ಯುವಕ ಎಂಜಿನಿಯರ್ ವಿಜಯ್ರಾಜ್ ಅವರನ್ನು ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಕೆಂಚಮ್ಮನಹಳ್ಳಿ ಗೋಪಾಲ್ ಹಾಗೂ ವೈ.ಎನ್ ಹೋಸಕೋಟೆ ಗೋಪಾಲ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ. ಗಿರೀಶ್, ಕಾರ್ಯದರ್ಶಿ ರವಿ, ಗಾಯಿತ್ರಿದೇವಿ, ಕೊರಟಗೆರೆ ಮಂಜುನಾಥ್, ತಿಪ್ಪೇಸ್ವಾಮಿ, ಶಿವಕುಮಾರ್ ಸಾಕೇಲ್ ಇದ್ದರು.