ಬಿಜೆಪಿಗೆ ರೈತರ ಹೆಸರೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
ಕ.ಪ್ರ.ವಾರ್ತೆ , ತಿಪಟೂರು , ಏ.26
ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ 10 ದಿನಗಳಲ್ಲೇ ಹಾವೇರಿ ಗೋಲಿಬಾರ್ ನಡೆಸಿ ರೈತರನ್ನು ಗುಂಡಿಕ್ಕಿ ಕೊಂದಿತು. ಅಲ್ಲದೆ ಚಾಮರಾಜನಗರ, ಬಳ್ಳಾರಿ ಸೇರಿದಂತೆ ಹಲವೆಡೆ ರೈತರ ಮೇಲೆ ದಬ್ಬಾಳಿಕೆ, ಲಾಟಿ ಚಾರ್ಜ್, ಬೂಟಿನೇಟು ಬಿದ್ದಿದ್ದು ಇವೆಲ್ಲದಕ್ಕೂ ಕಾರಣ ಬಿಜೆಪಿ ಸರ್ಕಾರ. ಕೇವಲ ಒಂದೇ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ರೈತರಿಗೆ ನೆರವಾಗದ ಅವರಿಗೆ ರೈತರ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ವಿರೋಧಪಕ್ಷದ ನಾಯಕ ಎಸ್. ಸಿದ್ದರಾಮಯ್ಯ ಹೇಳಿದರು.
ನಗರದ ಬಯಲು ರಂಗಮಂದಿರದಲ್ಲಿ ಇಂದು ಮಧ್ಯಾಹ್ನ 12ಗಂಟೆಯಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿ ಪರವಾಗಿ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಮಂತ್ರಕ್ಕಿಂತ ಉಗಿದಿದ್ದು ಜಾಸ್ತಿ. ರಾಷ್ಟ್ರದಲ್ಲಿಯೇ ಕರ್ನಾಟಕದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮೊದಲನೇ ಸ್ಥಾನ ಗಳಿಸಿದ್ದು, ಆ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ 10ವರ್ಷ ಹಿಂದೆ ಹೋಗಿದೆ. ಬಿಜೆಪಿ ಸರ್ಕಾರದ ಶಾಸಕರು, ಮಂತ್ರಿಗಳು ಭ್ರಷ್ಟಾಚಾರದ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ ಎಂದರು.
ಬಿಜೆಪಿ ಸರ್ಕಾರದ ವಿರುದ್ದ ಹೋರಾಟ ಮಾಡಿದ ಕಾಂಗ್ರೆಸ್ 5 ದಿನ ಹಗಲು ರಾತ್ರಿ ವಿಧಾನಸಭೆಯಲ್ಲಿ ಧರಣಿ ಸತ್ಯಾಗ್ರಹ ಮಾಡಿತು. ಶಿಷ್ಟಾಚಾರ, ದೇಶಭಕ್ತಿ, ಸಚ್ಚಾರಿತ್ರ್ಯದ ಪಕ್ಷ ಎನ್ನುವ ಬಿಜೆಪಿಯ ಪರಿಸ್ಥಿತಿ ಏನಾಗಿದೆ ಎಂದು ರಾಜ್ಯದ ಜನತೆಗೆ ತಿಳಿದಿದೆ. ಇನ್ನು ಜೆಡಿಎಸ್ ಅಪ್ಪ, ಮಕ್ಕಳ ಪಕ್ಷವಾಗಿದೆ ಎಂದು ಲೇವಡಿ ಮಾಡಿದರು.
ಸಾಲ ಮನ್ನಾ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ರುಪಾಯಿಯಂತೆ 30 ಕೆಜಿ ಅಕ್ಕಿಯನ್ನು ಪಡಿತರ ವ್ಯವಸ್ಥೆಯಲ್ಲಿ ಬಡವರಿಗೆ ನೀಡಲಾಗುವುದು. ದಿನದ 24ಗಂಟೆ ವಿದ್ಯುತ್, ವಸತಿ ಸೇರಿದಂತೆ ವಿವಿಧ ಸಾಲಗಳನ್ನು ಮನ್ನಾ ಮಾಡಲಾಗುವುದೆಂದರು.
ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸ್ಥಿರ ಸರ್ಕಾರ ರಚಿಸಲಿದೆ. ಪ್ರಾಮಾಣಿಕತೆ, ದಕ್ಷತೆ, ರೈತಪರ ಸೇವೆ ಮಾಡಲು ಬಡವರ ಪಕ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಆದ್ದರಿಂದ ತಮ್ಮನ್ನು ಗೆಲ್ಲಿಸುವಂತೆ ಮತದಾರರಿಗೆ ಕೋರಿದರು. ಮಾಜಿ ಶಾಸಕ ಎಸ್.ಪಿ.ಗಂಗಾಧರಪ್ಪ, ಮಾಜಿ ಪುರಸಭಾಧ್ಯಕ್ಷ ಶಿವಪ್ರಸಾದ್, ತಾ.ಕಾಂಗ್ರೆಸ್ ಅಧ್ಯಕ್ಷ ಪರಮಶಿವಯ್ಯ, ನಗರಸಭಾ ಸದಸ್ಯ ಟಿ.ಜಿ.ಲಿಂಗರಾಜು, ಹಾವೇನಹಳ್ಳಿ ಶಂಕರಪ್ಪ, ಕೆ.ಎಸ್.ಸದಾಶಿವಯ್ಯ, ಯುವ ಮುಖಂಡ ನಿಖಿಲ್ ರಾಜ್, ಮಹಮದ್ ಜುಬೇರ್, ಲೋಕೇಶ್ ಮಾಮ ಮತ್ತಿತರರಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆಯಾದರು.