ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿರು ಬಿಸಿಲಿಗೆ ಕೆಂಪಾದ ಯುವರಾಜ!

Vishwanath S
Updated On : 26 Apr 2013, 11:37 am

ತುಮಕೂರು: ಸುಡು ಬಿಸಿಲು ಹಾಗೂ ಕೆಂಧೂಳು ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿಗೆ ಉಸ್ಸಪ್ಪಾ ಎನ್ನುವಂತೆ ಮಾಡಿತು.
ತುಮಕೂರಿನ ಮಹಾತ್ಮಗಾಂಧಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಅಕ್ಷರಶಃ ಕಾಂಗ್ರೆಸ್‌ನ ಭಾವಿ ಪ್ರಧಾನಿ ಎಂದೇ ಬಿಂಬಿತವಾಗಿರುವ ರಾಹುಲ್‌ಗೆ ಬೆವರಿಳಿಸಿತು.
ಹಾವೇರಿಯಿಂದ ನೇರವಾಗಿ ತುಮಕೂರಿನ ಮಹಾತ್ಮಗಾಂಧಿ ಸ್ಟೇಡಿಯಂಗೆ ಹ್ಯಾಲಿಕಾಪ್ಟರ್‌ನಲ್ಲಿ ರಾಹುಲ್ ಬಂದಿಳಿದಾಗ ಅವರನ್ನು ಸ್ವಾಗತಿಸಿದ್ದು ಕೆಂಧೂಳು ಹಾಗೂ ಸುಡು ಬಿಸಿಲು. ಹೆಲಿಪ್ಯಾಡ್‌ನ ಪಕ್ಕದಲ್ಲೇ ವೇದಿಕೆ ಸಿದ್ಧವಾಗಿದ್ದರೂ, ರಾಹುಲ್ ಮುಖವನ್ನು ಈ ಬಿಸಿಲು ಕೆಂಪಾಗಿಸಿತು.
ತುಮಕೂರಿನಲ್ಲಿ ರಾಹುಲ್ ಇದ್ದದ್ದು ಕೇವಲ 20 ನಿಮಿಷ ಮಾತ್ರ. ವೇದಿಕೆಯಲ್ಲಿ ರಾಹುಲ್ ಭಾಷಣ ಆರಂಭಿಸುವಾಗ ಸೂರ್ಯ ನೆತ್ತಿಗೇರಿದ್ದ. ಅವರ ಹತ್ತೇ ನಿಮಿಷ ಭಾಷಣ ಮಾಡಿದರೂ, ಸುಮಾರು ಹತ್ತು ಬಾರಿ ಕಿಸೆಯಿಂದ ಕರ್ಚಿಫ್ ತೆಗೆದು ಮುಖವರೆಸಿಕೊಂಡರು.
ಕುರ್ಚಿ ಎತ್ತಿಟ್ಟ ರಾಹುಲ್: ವೇದಿಕೆ ಮೇಲೆ ಕೇವಲ ಐವರಿದ್ದರು. ರಾಹುಲ್‌ಗೆ ಹಾಕಿದ್ದ ಕುರ್ಚಿಯನ್ನು ಸ್ವತಃ ರಾಹುಲ್ ಗಾಂಧಿ ಅವರೇ ಆ ಕಡೆಗೆ ಎತ್ತಿಟ್ಟರು. ನಂತರ ತುಮಕೂರು ಜಿಲ್ಲೆಯ ಎಲ್ಲ 11 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಕೈ ಕುಲುಕಿದರು. ನಂತರ ಕಾಂಗ್ರೆಸ್ಸಿಗರು ರಾಹುಲ್‌ಗಾಂಧಿಗೆ ಮೈಸೂರು ಪೇಟ ತೊಡಿಸಿ, ಸನ್ಮಾನಿಸಿದರು. ಸುಡು ಬಿಸಿಲಲ್ಲೂ ಮಿರಿ ಮಿರಿ ಮಿಂಚುತ್ತಿದ್ದ ರಾಹುಲ್ ಜನರೆಡೆಗೆ ಕೈ ಬೀಸಿದಾಗ ಎಲ್ಲರೂ ಹರ್ಷಗೊಂಡರು.
ರಾಜೀವ್, ಸೋನಿಯಾ, ಈಗ ರಾಹುಲ್: ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣಕ್ಕೂ ರಾಜೀವ್‌ಗಾಂಧಿ ಕುಟುಂಬಕ್ಕೂ ಅದೆಂತದ್ದೋ ಆವಿನಾಭಾವ ಸಂಬಂಧ. ಇಲ್ಲಿ 23 ವರ್ಷಗಳ ಕೆಳಗೆ ಇದೇ ಸ್ಟೇಡಿಯಂನಲ್ಲಿ ಮಾಜಿ ಪ್ರಧಾನಿ ದಿ. ರಾಜೀವ್‌ಗಾಂಧಿ ಅವರು ಭಾಷಣ ಮಾಡಿ ಹೋಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಚುನಾವಣಾ ಭಾಷಣ ಮಾಡಿದ್ದರು. ಈಗ ರಾಹುಲ್‌ಗಾಂಧಿ ಕೂಡ ಇದೇ ವೇದಿಕೆಯಲ್ಲಿ ಭಾಷಣ ಮಾಡುವ ಮೂಲಕ ಮತದಾರರ ಗಮನ ಸೆಳೆಯಲು ಯತ್ನಿಸಿದರು.
ಕೈ ಬೀಸಿದ ಯುವತಿಯರು: ರಾಹುಲ್‌ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಯುವತಿಯರ ದಂಡೇ ಅಲ್ಲಿ ನೆರೆದಿತ್ತು. ವೇದಿಕೆಗೆ ಕಾಂಗ್ರೆಸ್ ಯುವ ನಾಯಕ ಆಗಮಿಸುತ್ತಿದ್ದಂತೆ ಯುವತಿಯರು ಅವರೆಡೆಗೆ ಕೈ ಬೀಸಿದರು. ಅದಕ್ಕೆ ಪ್ರತಿಯಾಗಿ ರಾಹುಲ್ ಕೂಡ ಕೈ ಬೀಸಿ ನಸು ನಕ್ಕರು. ಸುಮಾರು 20 ನಿಮಿಷಗಳ ಕಾಲ ತುಮಕೂರಿನಲ್ಲಿ ರಾಹುಲ್ ಮೇನಿಯಾ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement