ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೇಶಕ್ಕೆ ತೃತೀಯ ರಂಗ ಬೇಕಿದೆ: ಯಡಿಯೂರಪ್ಪ

Vishwanath S
Updated On : 28 Apr 2013, 12:22 pm

ಕ.ಪ್ರ. ವಾರ್ತೆ  ,   ತುಮಕೂರು  ,   ಏ.27
ಮಾಜಿ ಮುಖ್ಯಮಂತ್ರಿ ಹಾಗೂ ಕರ್ನಾಟಕ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತೃತೀಯ ರಂಗದ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.
ಅವರು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೆಳ್ಳಾವಿಯಲ್ಲಿ ಕೆಜೆಪಿ ಅಭ್ಯರ್ಥಿ ಎಚ್.ನಿಂಗಪ್ಪನವರ ಚುನಾವಣಾ ಪ್ರಚಾರ ಭಾಷಣದ ವೇಳೆ ಈ ಮೇಲಿನ ವಿಷಯ ಪ್ರತಿಪಾದಿಸಿದ್ದಾರೆ.
ರಾಷ್ಟ್ರೀಯ ಪಕ್ಷಗಳು ರಾಜ್ಯಗಳ ವಿಷಯದಲ್ಲಿ ಅನುಸರಿಸುತ್ತಿರುವ ಮಲತಾಯಿ ಧೋರಣೆಗೆ ಪ್ರತ್ಯುತ್ತರ ನೀಡಲು ದೇಶಕ್ಕೆ ತೃತೀಯ ರಂಗ ಅತ್ಯಗತ್ಯವಾಗಿದೆ.ಪ್ರಾದೇಶಿಕ ಪಕ್ಷಗಳ ನೇತೃತ್ವದಲ್ಲಿ ಪ್ರಬಲ ಕೇಂದ್ರ ಸರ್ಕಾರವನ್ನು ಸ್ಥಾಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಚರ್ಚಿಸುವ ಇಂಗಿತವನ್ನು ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ.  ಈ ನಿಟ್ಟಿನಲ್ಲಿ ತುಮಕೂರು ಸಂಸದ ಜಿ.ಎಸ್. ಬಸವರಾಜು ನೇತೃತ್ವದಲ್ಲಿ ಚರ್ಚಿಸಿ ಮೇ 8 ರ ನಂತರ ದೆಹಲಿಯಲ್ಲಿ ತೃತೀಯ ರಂಗ ರಚನೆಗೆ ಸಂಬಂಧಿಸಿದಂತೆ ಚಾಲನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ ಅವರು, ಹೈಕಮಾಂಡ್ ಸಂಸ್ಕೃತಿ ತೊಲಗಬೇಕು ಎಂದು ಬಲವಾಗಿ ಪ್ರತಿಪಾದಿಸಿದರು.
ಬದಲಾವಣೆ ಕಾಲ: ಈಗ ಕರ್ನಾಟಕದಲ್ಲಿ ಬದಲಾವಣೆ ಕಾಲ ಸಮೀಪಿಸಿದೆ. ಪ್ರಬಲ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ರಾಜ್ಯದ ಜನತೆಯ ಮೇಲಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ರಾಂತಿಕಾರಕ ಪ್ರಣಾಳಿಕೆಯನ್ನು ಕೆಜೆಪಿ ಬಿಡುಗಡೆ ಮಾಡಿದೆ. ತಾವು ಬೆಳಗ್ಗೆ 7 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ದುಡಿಯುತ್ತಿದ್ದು, ಕಾರ್ಯಕರ್ತರು ಕೇವಲ 8 ಗಂಟೆ ಕಾಲ ಶ್ರಮಿಸಿ, ಕೆಜೆಪಿಯನ್ನು ಗೆಲ್ಲಿಸುವುದರ ಮೂಲಕ ರಾಜ್ಯದಲ್ಲಿ ಹೊಸಶಕೆಗೆ ನಾಂದಿ ಹಾಡುವಂತೆ ಯಡಿಯೂರಪ್ಪ ಕರೆ ನೀಡಿದರು.
ರಾಹುಲ್‌ಗೆ ತಿರುಗೇಟು: ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಕಾಂಗ್ರೆಸ್ ಯುವರಾಜ ರಾಹುಲ್‌ಗಾಂಧಿ ಅವರ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ಭ್ರಷ್ಟಾಚಾರದಲ್ಲಿ ವಿಶ್ವದಲ್ಲೇ ಕರ್ನಾಟಕ ನಂ.1 ಸ್ಥಾನದಲ್ಲಿದೆ. ವಿಶ್ವದಾಖಲೆ ಸ್ಥಾಪಿಸಿದೆ ಎಂಬ ರಾಹುಲ್‌ಗಾಂಧಿ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಮೊದಲು ಅವರದೇ ಹಿಡಿತದಲ್ಲಿರುವ ಕಾಂಗ್ರೆಸ್‌ನ ಕೇಂದ್ರ ಸರ್ಕಾರದ ಭ್ರಷ್ಟಾಚಾರದ ಬಗ್ಗೆ, ಅವ್ಯವಸ್ಥೆ ಬಗ್ಗೆ ಮಾತನಾಡಲಿ. ಸರಿಪಡಿಸಲಿ ಎಂದು ಮಾರ್ಮಿಕವಾಗಿ ನುಡಿದರು.
ಶೆಟ್ಟರ್ ವಿರುದ್ಧ ಕಿಡಿ: ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ದ ಕೂಡ ಯಡಿಯೂರಪ್ಪ ಕಿಡಿ ಕಾರಿದರು. ಶೆಟ್ಟರ್ ಕೆಜೆಪಿ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟು, ರಾಜಿನಾಮೆ ನೀಡಿ ಅಖಾಡಕ್ಕಿಳಿಯಲಿ. ಆಗ ಗೊತ್ತಾಗುತ್ತೆ ಎಂದು ಸವಾಲು ಹಾಕಿದರು.  ಶೆಟ್ಟರ್‌ಗೆ ಮೇ 8 ರ ನಂತರ ಯಾರ ಸ್ಥಿತಿ ಏನು ಎಂಬುದು ಗೊತ್ತಾಗುತ್ತೆ ಮಾರ್ಮಿಕವಾಗಿ ನುಡಿದರು.
ತುಮಕೂರು ಸಂಸದ ಜಿ.ಎಸ್. ಬಸವರಾಜು, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಚ್.ನಿಂಗಪ್ಪ, ಕೆಜೆಪಿ ರಾಜ್ಯ ಉಪಾಧ್ಯಕ್ಷ ಸಿ.ವಿ. ಮಹದೇವಯ್ಯ, ಜಿಲ್ಲಾ ಕೆಜೆಪಿ ಅಧ್ಯಕ್ಷ ಹಾಗೂ ಜಿಪಂ
ಸದಸ್ಯ ಹೆಬ್ಬಾಕ ರವಿಶಂಕರ್, ಯುವ ಮುಖಂಡ ರಾಯಸಂದ್ರ ರವಿಕುಮಾರ್ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಬೈಕ್ ರ್ಯಾಲಿ ಮೂಲಕ ನೂರಾರು ಕೆಜೆಪಿ ಕಾರ್ಯಕರ್ತರು ಯಡಿಯೂರಪ್ಪನವರನ್ನು ವೇದಿಕೆಗೆ ಕರೆ ತಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement