ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬೆಸ್ತು ಬಿದ್ದ ಮತ ಯಾಚಿಸಲು ಹೋದ ಮುಖಂಡರು

Vishwanath S
Updated On : 28 Apr 2013, 12:23 pm

ಕ.ಪ್ರ. ವಾರ್ತೆ  ,   ಕುಣಿಗಲ್  ,   ಏ.27
ಅಣ್ಣ... ನಿಮ್ಮ ಗುರುತು ಆಟೋರಿಕ್ಷಾ ಅಲ್ವೇನಣ್ಣ... ಗೊತ್ತು ಬಿಡಣ್ಣ... ಕಳೆದ ತಿಂಗಳು ಬಂದಿದ್ದೆ, ಈಗ ಮತ್ತೆ ಬಂದಿದ್ದೀ... ಆಟೋರಿಕ್ಷಾಕ್ಕೆ ಒಟ್ ಹಾಕ್ತೀವಿ. ಕಳೆದಸರ್ತಿ ನೋಡ್ಕೋಂಡಂಗೆ ನೋಡ್ಕೋ ಎಂದು ಪಟ್ಟಣಪ್ರದೇಶದ ಕೆಲ ಮತದಾರರು ಜೆಡಿಎಸ್ ಪರ ಮತ ಯಾಚಿಸಲು ಹೋದಂತಹ ಮುಖಂಡರಿಗೆ ತಿಳಿಸಿದಾಗ, ಆ ಮುಖಂಡರು ಬೆಸ್ತುಬೀಳುತ್ತಿರುವ ಪ್ರಸಂಗ  ನಡೆಯುತ್ತಿದೆ.
ಕೆಲವೆ ದಿನಗಳ ಹಿಂದೆ ಪುರಸಭೆ ಚುನಾವಣೆಗಳನ್ನು ಎದುರಿಸಿದ್ದ ಪಟ್ಟಣದ ಮತದಾರರ, ಕೈಬೆರಳ ಶಾಹಿ ಬಣ್ಣ ಮಾಸುವ ಮುನ್ನವೇ ಮತ್ತೊಂದು ಚುನಾವಣೆ ಎದುರಿಸುವ ಅನಿವಾರ್ಯತೆ ಎದುರಾಗಿದೆ. ಕಳೆದ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿ ಫಾರಂ ವಿತರಣೆಯ ಉಸ್ತುವಾರಿಯನ್ನು ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡರಿಗೆ ನೀಡಿದ ಕಾರಣ, ಬೇಸತ್ತ ಮಾಜಿ ಸಚಿವ ಡಿ.ನಾಗರಾಜಯ್ಯ, ತಮ್ಮ ಬೆಂಬಲಿಗರೊಂದಿಗೆ ಸಮಾಲೋಚಿಸಿ ಹೈಕಮಾಂಡ್‌ಗೆ ತಮ್ಮ ಬಲಪ್ರದರ್ಶಿಸಲು, ಬಂಡಾಯ ಜೆಡಿಎಸ್ ಅಭ್ಯರ್ಥಿಗಳನ್ನು ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿ ಕಣಕ್ಕಿಳಿಸಿದರು.
 23 ವಾರ್ಡ್‌ಗಳ ಪೈಕಿ ಎಳು ವಾರ್ಡ್‌ಗಳಲ್ಲಿ ಜಯಗಳಿಸಿದ್ದರಲ್ಲದೆ, ನಾಲ್ಕಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಕೆಲವೆ ಮತಗಳ ಅಂತರದಿಂದ ಸೋಲುಂಡು, ಹೈಕಮಾಂಡ್‌ಗೆ ತಮ್ಮ ತಾಕತ್ತಿನ ದರ್ಶನ ಮಾಡಿಸಿದ್ದರು.  ಹೈಕಮಾಂಡ್ ವಿಧಾನಸಭೆ ಚುನಾವಣೆ ಟಿಕೆಟ್ ನಾಗರಾಜಯ್ಯನವರಿಗೆ ನೀಡುವ ಮುನ್ನ, ಹಲವು ಬಾರಿ ಅಳೆದು, ತೂಗಿ, ವಿಧಿ ಇಲ್ಲದೆ ಅವರಿಗೆ ಸಿ ಫಾರಂ ನೀಡಿ, ಅಧಿಕೃತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರು.
 ಪಕ್ಷದ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದ ಡಿ.ನಾಗರಾಜಯ್ಯ ತಣ್ಣಗಾಗಿ, ಅಧಿಕೃತ ಅಭ್ಯರ್ಥಿಯಾಗಿ, ಭರದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.  ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ನಾಯಕ ಡಿ.ನಾಗರಾಜಯ್ಯ ಜೆಡಿಎಸ್ ಅಧಿಕೃತ  ಅಭ್ಯರ್ಥಿಯಾಗಿರುವ ಕಾರಣ, ಪುರಸಭೆ ಚುನಾವಣೆಯಲ್ಲಿ ಬಂಡಾಯ ಜೆಡಿಎಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿದವರು, ವಿಜೇತರಾದ ಮುಖಂಡರು, ಪುರಸಭೆ ಚುನಾವಣೆ ನಡೆದು ಕೆಲವೆ ದಿನಗಳ ನಂತರ ಪುನಃ ಅದೇ ಮುಖಂಡರು, ಮತದಾರರ ಮನೆ ಬಾಗಿಲಿಗೆ ಬಂದಾಗ, ಕೆಲ ಮತದಾರರು ಮೇಲಿನಂತೆ ಹೇಳುತ್ತಿದ್ದು, ಪ್ರಚಾರಕ್ಕೆ ತೆರಳಿದ ಮುಖಂಡರು ಬೆಸ್ತುಬೀಳುವಂತಾಗುತ್ತಿದೆ. ಕಾರಣ, ಪುರಸಭೆ ಚುನಾವಣೆಯಲ್ಲಿ ಬಂಡಾಯ ಜೆಡಿಎಸ್ ಅಭ್ಯರ್ಥಿಗಳಿಗೆ ಆಟೋರಿಕ್ಷಾ ಚಿಹ್ನೆ ನೀಡಲಾಗಿತ್ತು.
ಹೀಗಾದ್ರೆ ಹೇಗೆ?: ವಿಧಿ ಇಲ್ಲದೆ, ನಡೆದ ವಿದ್ಯಾಮಾನಗಳ ವಿವರಣೆ ನೀಡಲಾಗದೆ, ಪರದಾಡುತ್ತಾ, ತೆನೆಹೊತ್ತ ಮಹಿಳೆಗೆ ಗುರುತಿಗೆ ಮತಹಾಕಿ ಎಂದು ಅವಲತ್ತುಕೊಂಡು, ಮುಂದಿನ ಮನೆಗೆ ಪ್ರಚಾರಕ್ಕೆ ತೆರಳಿದರೆ, ರಾಜಕೀಯದ ಗಂಧಗಾಳಿ ಗೊತ್ತಿಲ್ಲದಂತಹ ಕೆಲಮತದಾರರು, ಕಳೆದ ತಿಂಗಳೊಂದು ಪಕ್ಷಕ್ಕೆ ಕೇಳ್ತಾರೆ, ಈ ತಿಂಗಳು ಒಂದು ಪಕ್ಷಕ್ಕೆ ಕೇಳ್ತಾರೆ. ಹಿಂಗಾದ್ರೆ ಹೆಂಗೆ ಎಂದು ಗೊಣಗುತ್ತಿದ್ದಾರೆ. ಮತ ಯಾಚಿಸಲು ಹೋದಂತಹ ಮುಖಂಡರು, ಮತದಾರರ ಪ್ರಶ್ನೆಗೆ ಸಮಂಜಸ ಉತ್ತರ ನೀಡಲಾಗದೆ ಬೆಸ್ತುಬೀಳುತ್ತಿರುವುದನ್ನು ನೋಡಿ ವಿರೋಧ ಪಕ್ಷದವರು ಒಳಗೊಳಗೆ ಮುಸಿನಗೆ ನಗುತ್ತಿದ್ದಾರೆ. ಪ್ರಸಕ್ತ ವಿದಾನಸಭೆ ಚುನಾವಣೆಯಲ್ಲಿ ಆಟೋರಿಕ್ಷಾ ಚಿಹ್ನೆ ಪಡೆದಿರುವ, ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ರವಿಕಿರಣ್, ಈ ವಿದ್ಯಮಾನಗಳಿಂದ ತಮಗಾಗುವ ಲಾಭದ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement