'ಸಾಮಾಜಿಕ ನ್ಯಾಯಕ್ಕೆ ಕಾಂಗ್ರೆಸ್ ಕಟಿಬದ್ಧ'
ಮಧುಗಿರಿ: ಕಾಂಗ್ರೆಸ್ ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವಲ್ಲಿ ಕಟಿಬದ್ಧವಾಗಿದೆ ಎಂದು ಅಭ್ಯರ್ಥಿ ಕೆ.ಎನ್. ರಾಜಣ್ಣ ನುಡಿದರು. ಬಿಜೆಪಿ ಮುಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ಗೆ ಸೇರಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದ ಅಭ್ಯುದಯ, ಸುಭದ್ರ ರಾಷ್ಟ್ರ ನಿರ್ಮಾಣ ಹಾಗೂ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಬದ್ಧವಾಗಿದೆ. ಆದ್ದರಿಂದ ತಮ್ಮ ಸೇವೆ ಮಾಡಲು ತನಗೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದರು. ನಾನು ಗೆದ್ದು ಬಂದರೆ ಬರಪೀಡಿತ ಪ್ರದೇಶವಾದ ಮಧುಗಿರಿ ತಾಲೂಕಿಗೆ ಶಾಶ್ವತ ನೀರಾವರಿ ಸೌಲಭ್ಯ, ತಾಲೂಕಿನ ಎಲ್ಲ ಕೆರೆಗಳಿಗೆ ನೀರು, ಶುದ್ಧ ಕುಡಿವ ನೀರು ಒದಗಿಸುವುದು ಸೇರಿದಂತೆ ಮಧುಗಿರಿಯನ್ನು ಒಂದು ಮಾದರಿ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಹಾಗಾಗಿ ನಿಮ್ಮ ಬೆಂಬಲ ನೀಡಿ ನನ್ನನ್ನು ಗೆಲ್ಲಿಸಿ ಕೊಡಬೇಕು ಎಂದು ಮನವಿ ಮಾಡಿದರು.