ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ವಿಫಲ
ಪಾವಗಡ: ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣಕ್ಕೆ ನಿಗದಿತ ಅವಧಿಗಿಂತ 1 ಗಂಟೆ ತಡವಾಗಿ ಆಗಮಿಸಿದ ಪ್ರವಾಸೋದ್ಯಮ ಸಚಿವ ಚಿರಂಜೀವಿ ವೇದಿಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಭದ್ರತೆ ವೈಫಲ್ಯದಿಂದ ಕೆಲ ಸಮಯ ಗೊಂದಲ ನಿರ್ಮಾಣವಾಯಿತು.
ಚಿರಂಜೀವಿ ಅಭಿಮಾನಿಗಳ ಸಂಖ್ಯೆ ಇಲ್ಲಿ ಭಾರೀ ಸಂಖ್ಯೆಯಲ್ಲಿದ್ದು ಅವರ ಆಗಮನ ಹಿನ್ನೆಲೆಯಲ್ಲಿ ಸುಮಾರು 30 ಸಾವಿರಕ್ಕಿಂತ ಹೆಚ್ಚಿನ ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದರು. ಮಾರಮ್ಮನ ಗುಡಿ ಮೈದಾನದಲ್ಲಿ ಸಿದ್ಧಪಡಿಸಿದ ವೇದಿಕೆ ಅತಿ ಚಿಕ್ಕದಾಗಿ ನಿರ್ಮಿಸಿದ್ದ ಕಾರಣ ವೇದಿಕೆಯಲ್ಲಿ ಅವರ ಜೊತೆ ಆಗಮಿಸಿದ್ದ ಅತಿಥಿಗಳಿಗೆ ಜಾಗವಿಲ್ಲದೇ ಪರದಾಟ ಶುರುವಾಗಿ ಕಾರ್ಯಕರ್ತರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸಪಟ್ಟರು.
ಸಚಿವ ಚಿರಂಜೀವಿ ವೇದಿಕೆ ಪ್ರವೇಶಿಸುತ್ತಿದ್ದಂತೆ ವೇದಿಕೆ ಮುಂಭಾಗದಲ್ಲಿ ನಿರ್ಮಿಸಿದ್ದ ರಕ್ಷಣಾ ಗೋಡೆ ಕಿತ್ತ ಅಭಿಮಾನಿಗಳು ಮುತ್ತಿಗೆ ಹಾಕಿ ಚಿರಂಜೀವಿಗೆ ಜೈಕಾರ ಕೂಗಿದರು. ಇದೇ ಸಂದರ್ಭದಲ್ಲಿ ಧ್ವನಿವರ್ಧಕ ವ್ಯವಸ್ಥೆ ಸರಿ ಇಲ್ಲದ ಕಾರಣ ಅಲ್ಲಲ್ಲಿ ಭಾಷಣ ಕೇಳಲು ನಿಂತಿದ್ದ ಅಭಿಮಾನಿಗಳಿಗೆ ನಿರಾಶೆ ಆಯಿತು. ಕಾರ್ಯಕ್ರಮದಲ್ಲಿ ಕಿಕ್ಕಿರಿದ ಸಾವಿರಾರು ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾದ ಕಾರಣ ಕಾರ್ಯಕ್ರಮ ಅವ್ಯವಸ್ಥೆಯಿಂದ ಕೂಡಿತ್ತು.
ಕಾರ್ಯಕ್ರಮ ಮುಗಿದ ನಂತರ ಪಟ್ಟಣದ ಪತಂಜಲಿ ನಗರದಲ್ಲಿರುವ ಮಾಜಿ ಶಾಸಕ ಸೋಮ್ಲಾನಾಯಕ್ ಮನೆಗೆ ತೆರಳಿದ ಚಿರಂಜೀವಿ, ಸಚಿವ ರಘುವೀರರೆಡ್ಡಿ ಮನೆಯಲ್ಲಿ ಚಹ ಕೂಟ ನಡೆಸಿ ತಾಲೂಕಿನ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು.