ಪಟಾಕಿ ಸ್ಫೋಟ: 2 ಸಾವು, ಮೂವರಿಗೆ ತೀವ್ರ ಗಾಯ
ಕ.ಪ್ರ.ವಾರ್ತೆ , ತುಮಕೂರು , ಏ.28
ಪಟಾಕಿ ಸ್ಫೋಟಕ್ಕೆ ದಂಪತಿ ಮೃತಪಟ್ಟು, ಮೂವರು ತೀವ್ರವಾಗಿ ಗಾಯಗೊಂಡ ಘಟನೆ ತುಮಕೂರು ಗ್ರಾಮಾಂತರದ ಗೂಳೂರಿನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಗೂಳೂರಿನ ತೋಟದ ಮನೆಯಲ್ಲಿಟ್ಟಿದ್ದ ಪಟಾಕಿ ಬೆಳಗ್ಗೆ 9-30 ರ ಸುಮಾರಿಗೆ ಸ್ಫೋಟಗೊಂಡಿದ್ದು,ನರಸೀಯಪ್ಪ (65) ಸ್ಥಳದಲ್ಲೇ ಮೃತಪಟ್ಟರೆ, ಜಯಮ್ಮ (60) ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರ ಮಗಳಾದ ಸರೋಜಮ್ಮ (40) ಪಟಾಕಿ ತಯಾರಿಸಲು ಬರುತ್ತಿದ್ದ ಕೆಲಸಗಾರರಾದ ಸಿದ್ದಲಿಂಗಪ್ಪ (50), ರಾಜಣ್ಣ (55) ತೀವ್ರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ಮನೆಯಲ್ಲಿ ಪಟಾಕಿಗಳನ್ನು ಸಹ ತಯಾರಿಸುತ್ತಿದ್ದು, ದಾಸ್ತಾನನನ್ನು ಕೂಡ ಮಾಡಲಾಗುತ್ತಿತ್ತು ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಮನೆಯ ಹೆಂಚು, ಮಾಡು ಹಾರಿ ಹೋಗಿ, ಪಕ್ಕದಲ್ಲೇ ಇರುವ ಗೂಳೂರು ಕೆರೆಗೆ ಬಿದ್ದಿವೆ. ಅಕ್ಕ-ಪಕ್ಕದ ಮನೆಗಳು ಸ್ಫೋಟದ ತೀವ್ರತೆಗೆ ಅದುರಿವೆ. ಪಟಾಕಿ ಶೇಖರಿಸಿಟ್ಟಿದ್ದ ಮನೆ ಸಂಪೂರ್ಣವಾಗಿ ಭಸ್ಮವಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ತಹಸೀಲ್ದಾರ್ ಮಾರುತಿ ಪ್ರಸನ್ನ, ಸಿಪಿಐ ಮರಿಯಪ್ಪ, ಎಸ್ಐ ಕುಮಾರ್ ಸ್ಥಳಕ್ಕೆ ಬೇಟಿ ನೀಡಿದ್ದರು. ಪ್ರಕರಣ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.