ರಾಜ್ಯದಲೆಲ್ಲಾ ಕಾಂಗ್ರೆಸ್ ಪರ ಅಲೆ
ಕ.ಪ್ರ.ವಾರ್ತೆ , ಕುಣಿಗಲ್ , ಏ.28
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲೆಲ್ಲಾ ಕಾಂಗ್ರೆಸ್ ಪರ ಅಲೆ ಇದ್ದು, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಆಡಳಿತದಿಂದ ಜನತೆ ಬೇಸತ್ತು ಕಾಂಗ್ರೆಸ್‌ಗೆ ಬೆಂಬಲಿಸುವ ಮೂಲಕ 140 ರಿಂದ 150 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ, ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಮುಖಂಡ ಡಿ.ಕೆ.ಶಿವಕುಮಾರ್ ತಿಳಿಸಿದರು.
ಭಾನುವಾರ ಮಧ್ಯಾಹ್ನ ಕಾಂಗ್ರೆಸ್ ಅಭ್ಯರ್ಥಿ ಬಿ.ಬಿ.ರಾಮಸ್ವಾಮಿಗೌಡರ ಪರ ಪಟ್ಟಣದಲ್ಲಿ ಮತಯಾಚನೆ ಮಾಡಿ, ಮಾತನಾಡಿದ ಅವರು, ಮಧ್ಯಾಹ್ನದ ಬಿಸಿಯೂಟ ಗ್ರಾಮಾಂತರ ಪ್ರದೇಶದ ಮಹಿಳೆಯರು ಆರ್ಥಿಕ ಸ್ವಾವಲಂಬನೆಗೆ ಸ್ತ್ರೀಶಕ್ತಿ ಯೋಜನೆ ಅಸ್ತಿತ್ವಕ್ಕೆ ತಂದು, ಭ್ರಷ್ಟಾಚಾರ ರಹಿತ, ಸ್ಥಿರ ಆಡಳಿತ ನೀಡುವ ಮೂಲಕ ಕಾಂಗ್ರೆಸ್ ಹಲವು ಸಾಧನೆಗಳನ್ನು ಮಾಡಿದೆ. ಅಪರೂಪಕ್ಕೆ ಅಧಿಕಾರಕ್ಕೆ ಬಂದ ಬಿಜೆಪಿ ಭ್ರಷ್ಟಾಚಾರದಲ್ಲೆ ಮುಳುಗಿ ಜನವಿರೋಧಿಯಾಗಿದೆ ಎಂದರು.
ಜೆಡಿಎಸ್‌ಗೆ ನೆಲೆ ಇಲ್ಲ: ಇನ್ನು ಜೆಡಿಎಸ್‌ಗೆ ಭದ್ರ ನೆಲೆ ಇಲ್ಲ. ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾಗಿ, ಕುಣಿಗಲ್ ಕ್ಷೇತ್ರಕ್ಕೆ ಸಂಸದರಾಗಿ ಆಯ್ಕೆಯಾಗಿ ನಾಲ್ಕು ವರ್ಷ ಕಳೆಯುತ್ತಾ ಬಂದರೂ ಒಮ್ಮೆಯೂ ಭೇಟಿ ನೀಡದೆ, ಸಂಸದರ ನಿಧಿಯಿಂದ ಅಭಿವೃದ್ಧಿ ಕಾರ್ಯಮಾಡದೆ, ಮತ ಕೇಳಲು ಮಾತ್ರ ಸ್ವಾರ್ಥಪರ ರಾಜಕಾರಣಕ್ಕೆ ಬಂದುಹೋಗುತ್ತಿದ್ದಾರೆ. ನಿಜಕ್ಕೂ ಪ್ರಜ್ಞಾವಂತ ಮತದಾರರು ಜೆಡಿಎಸ್‌ಗೆ ತಕ್ಕಪಾಠ ಕಲಿಸಬೇಕೆಂದ ಅವರು, ಈ ಬಾರಿ ರಾಮನಗರದಲ್ಲಿ ಕಣಕ್ಕಿಳಿದಿರುವ ಕುಮಾರಸ್ವಾಮಿಯವರನ್ನು ಮತದಾರರು ತಿರಸ್ಕರಿಸುವ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮೂವತ್ತು ಕೆಜೆ ಅಕ್ಕಿ ನೀಡುವ ಘೋಷಣೆ ಮಾಡಿದ್ದನ್ನು ನೋಡಿ ಬಿಜೆಪಿ ಘೋಷಣೆ ಮಾಡಿದೆ. ಸ್ಥಿರ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದ ಅವರು, ಕುಣಿಗಲ್ ಕಾಂಗ್ರೆಸ್ ಭದ್ರಕೋಟೆಯಾಗಿದ್ದು ಈ ಬಾರಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಅಧಿಕ ಮತಗಳಿಂದ ಆರಿಸಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸ್ಥಾಪನೆಯಾಗಲು ಸಹಕರಿಸುವಂತೆ ಮನವಿ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ಮುಖಂಡರಾದ ಮುನ್ನ, ಶಂಕರ್, ಗಿರೀಶ್, ಇಂದುಮತಿ, ಅರುಣಕುಮಾರ್, ಜಗದೀಶ್ ಸೇರಿದಂತೆ ಇತರರು ಇದ್ದರು.