ಸಮಸ್ಯೆಗೆ ಸ್ಪಂದಿಸುವ ಕೆಎನ್‌ಆರ್ ಗೆಲ್ಲಿಸಿ: ಚಿರಂಜೀವಿ
ಕ.ಪ್ರ.ವಾರ್ತೆ , ತುಮಕೂರು , ಏ.28
ಎರಡು ಬಾರಿ ಸೋತರೂ ಜನರ ಮಧ್ಯೆ ಇದ್ದು, ಸಮಸ್ಯೆಗೆ ಸ್ಪಂದಿಸುತ್ತಿರುವ ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ ಅವರನ್ನು ಬೆಂಬಲಿಸುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವ ಹಾಗೂ ನಟ ಚಿರಂಜೀವಿ ಕರೆ ನೀಡಿದರು.
ಅವರು ಮಧುಗಿರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್. ರಾಜಣ್ಣ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಸೋತರೂ ಅಧೀರರಾಗದೆ, ಜನರ ನಡುವೆಯೇ ಇರುವ,ಜನತೆಯ ಸಮಸ್ಯೆಗಳಿಗೆ ಸದಾಕಾಲ ಸ್ಪಂದಿಸುವ ಮೂಲಕ ಕೆ.ಎನ್. ರಾಜಣ್ಣ ನಿಜವಾದ ಜನನಾಯಕರಾಗಿದ್ದಾರೆ. ಇವರನ್ನು ಈ ಬಾರಿ ಗೆಲ್ಲಿಸುವ ಜವಾಬ್ದಾರಿ ಮಧುಗಿರಿ ಜನತೆಯ ಮೇಲಿದೆ ಎಂದರು.
ಸ್ಥಿರ ಸರ್ಕಾರಕ್ಕಾಗಿ, ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತನೀಡಿ ಎಂದು ಮನವಿ ಮಾಡಿದ ಚಿರಂಜೀವಿ, ಯುವಜನತೆ, ಮಹಿಳೆಯರ ಹಾಗೂ ಎಲ್ಲ ವರ್ಗದ ಜನತೆಯ ಪರವಾಗಿ ಕಾಂಗ್ರೆಸ್ ಜನಪರ ಕಾರ್ಯಕ್ರಮಗಳನ್ನು ರೂಪಿಸಲಿದೆ. ಜನತೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸುವಂತೆ ಮನವಿ ಮಾಡಿದರು.
ಜೆಡಿಎಸ್ ವಿರುದ್ಧ ಟೀಕೆ: ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ. ಅವರದು ತೋರಿಕೆಯ ರಾಜಕಾರಣ. ಒಬ್ಬ ವ್ಯಕ್ತಿ ಜೆಡಿಎಸ್ ನಿಂದ ಗೆದ್ದು, ಆಪರೇಷನ್ ಕಮಲಕ್ಕೀಡಾದರೆ, ಮತ್ತೊಬ್ಬರು ಗೆದ್ದು ಕೊನೆಗೆ ಕ್ಷೇತ್ರವನ್ನೇ ಖಾಲಿ ಮಾಡಿದರು ಎಂದು ಟೀಕಿಸಿದರು.
ಬಿಜೆಪಿ ಭ್ರಷ್ಟ ಪಕ್ಷ: ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ದಾಖಲೆ ಸ್ಥಾಪಿಸಿತು. ಅಭಿವೃದ್ಧಿ ಶೂನ್ಯವಾಗಿ, ಸ್ವಂತ ಅಭಿವೃದ್ಧಿಯಲ್ಲೇ ಮಂತ್ರಿಗಳು ಶಾಸಕರು ಕಾಲ ಕಳೆದರು. ರಾಜ್ಯ ದಿವಾಳಿಯಾಯಿತು. ಬಿಜೆಪಿ ಸರ್ಕಾರದ ಮಂತ್ರಿಗಳು ಹಣ ಲೂಟಿ ಮಾಡಿದರು. ಜೈಲಿಗೆ ಹೋಗುವಲ್ಲಿ ಪೈಪೋಟಿ ನಡೆಸಿದರು ಎಂದು ಮಾರ್ಮಿಕವಾಗಿ ನುಡಿದರು.
ಮಧುಗಿರಿ ಐತಿಹಾಸಿಕ ಕ್ಷೇತ್ರ: ಮಧುಗಿರಿ ಐತಿಹಾಸಿಕ ಕ್ಷೇತ್ರ. ಇಂತಹ ಕ್ಷೇತ್ರವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡುವುದು ರಾಜಕಾರಣಿಗಳ ಧರ್ಮವಾಗಬೇಕು ಎಂದರು.
ಸಭೆಯಲ್ಲಿ ಆಂಧ್ರ ಸಚಿವ ರಘುವೀರರೆಡ್ಡಿ ಮಾತನಾಡಿದರು. ಮಧುಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್. ರಾಜಣ್ಣ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು.