ಕಾಂಗ್ರೆಸ್ನ ಜಾತಿ ರಾಜಕಾರಣ ತಾಲೂಕು ಜನತೆ ಮನ್ನಿಸರು
ಕ.ಪ್ರ.ವಾರ್ತೆ ತಿಪಟೂರು ಏ.29
ಜಾತಿ ರಾಜಕಾರಣದಲ್ಲಿ ನಿರತರಾಗಿರುವ ತಾಲೂಕು ಕಾಂಗ್ರೆಸ್ ಅಭ್ಯರ್ಥಿ ಮತ್ತು ಮುಖಂಡರುಗಳಿಗೆ ಕಲ್ಪತರು ನಾಡಿನ ಪ್ರಜ್ಞಾವಂತ ಮತದಾರರು ಮೇ 5ರಂದು ನಡೆಯಲಿರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ಕೆಜೆಪಿ ಅಭ್ಯರ್ಥಿ ಲೋಕೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಲಿನ ಭೀತಿಯಿಂದಾಗಿ ತಾಲೂಕು ಕಾಂಗ್ರೆಸ್ನವರು ತಾಲೂಕಿನ ರಾಜಕೀಯ ಇತಿಹಾಸದಲ್ಲೇ ಮತಯಾಚಿಸಲು ಎಂದೂ ಕಂಡು ಕೇಳಿಯದಂತಹ ಜಾತಿ, ಉಪಜಾತಿ ಎಂಬ ಅಸ್ತ್ರಗಳನ್ನು ಪ್ರಯೋಗಿಸುವ ಮೂಲಕ ಜಾತಿ ಜಾತಿಗಳ ಮಧ್ಯೆ ದ್ವೇಷದ ದಳ್ಳುರಿ ಬಿತ್ತುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಳ್ಳಿ ಇಟ್ಟಂತಾಗಿದೆ ಎಂದು ಆರೋಪಿಸಿದ್ದಾರೆ.
ತಾಲ್ಲೂಕಿನಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳನ್ನು ಕಾಂಗ್ರೆಸ್ ನೋಡಿಯೂ ನೋಡದಂತೆ ಕುಳಿತಿದ್ದು,ಅವರು ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ. ಹಲವಾರು ವರ್ಷಗಳಿಂದ ತಾಲೂಕಿನ ಜೀವನಾಡಿ ಬೆಳೆಯಾದ ಕೊಬ್ಬರಿ ಬೆಲೆ ಕುಸಿದಿದ್ದರೂ ರೈತರ ಪರ ಯಾವುದೇ ಹೋರಾಟ ಮಾಡಲಿಲ್ಲ. 5ವರ್ಷಗಳಿಂದ ದುರಾಡಳಿತ ನಡೆಸುತ್ತಿದ್ದ ಬಿಜೆಪಿ ಆಡಳಿತದ ವಿರುದ್ದವೂ ಧ್ವನಿ ಎತ್ತಲಿಲ್ಲ. ಆದರೆ, ಚುನಾವಣಾ ಸಂದರ್ಭದಲ್ಲಿ ಮಾತ್ರ ಕಣ್ಣೀರು ಸುರಿಸುತ್ತಿರುವುದನ್ನು ತಾಲೂಕಿನ ಪ್ರಬುದ್ಧ ಮತದಾರರು ಎಂದಿಗೂ ಕ್ಷಮಿಸಲಾರರು ಎಂದು ಲೋಕೇಶ್ವರ ಪ್ರಕಟಣೆಯಲ್ಲಿ ಕಿಡಿ ಕಾರಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರು ತಾಲೂಕಿಗೆ ನೀಡಿರುವ ನೂರಾರು ಕೋಟಿಗಳ ಕೆಲಸ ಕಾರ್ಯಗಳ ಜತೆಗೆ ರೈತ, ಬಡವ, ದಲಿತಪರ ನಿಲುವುಗಳ್ನು ಮನಗಂಡು ಕೆಜೆಪಿಗೆ ಅಭೂತಪೂರ್ವ ಯಶಸ್ಸು ನೀಡಲಿದ್ದಾರೆ ಎಂದು ಲೋಕೇಶ್ವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.