ಛಲವಾದಿ-ಮಾದಿಗ ಒಕ್ಕೂಟ ಕಾಂಗ್ರೆಸ್ ಬೆಂಬಲಿಸಲು ಸಾಹಿತಿ ಸಿದ್ದಯ್ಯ ಮನವಿ
ಕ.ಪ್ರ.ವಾರ್ತೆ ಮಧುಗಿರಿ ಏ.29
ಮಧುಗಿರಿ ವಿಧಾನಸಭಾ ಕ್ಷೇತ್ರದ ಎಲ್ಲ ಛಲವಾದಿ-ಮಾದಿಗ ಒಕ್ಕೂಟ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಅವರನ್ನು ಬೆಂಬಲಿಸುವಂತೆ ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ ತಾಲೂಕಿನ ಮಾದಿಗ ಹಾಗೂ ಛಲವಾದಿ ಜನಾಂಗಕ್ಕೆ ಕರೆ ನೀಡಿದ್ದಾರೆ.
ಇಲ್ಲಿನ ಪತ್ರಕರ್ತರ ಸಂಘದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಶ್ರೀಸಾಮಾನ್ಯರ ನೋವು-ನಲಿವಿಗೆ ಸ್ಪಂದಿಸಿ ಕೆಲಸ ಮಾಡುತ್ತಾರೆ. ಅಲ್ಲದೆ ರಾಜಣ್ಣ ಎರಡು ಸಲ ಸೋತರು ಕೂಡ ದೃತಿಗೆಡದೆ ಕ್ಷೇತ್ರದಲ್ಲಿ ನಿಂತು ಕಷ್ಟ ಸುಖಕ್ಕೆ ಸ್ಪಂದಿಸಿದ್ದಾರೆ. ಆದ ಕಾರಣ ಇಂತಹ ವ್ಯಕ್ತಿಯನ್ನು ಮಾದಿಗ-ಛಲವಾದಿಗಳು ಒಗ್ಗೂಡಿ ರಾಜಣ್ಣ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಕ್ಷೇತ್ರದಲ್ಲಿ ಬಿಎಸ್ಪಿ, ಜೆಡಿಎಸ್ ಏಜಂಟರಂತೆ ವರ್ತಿಸಿಸುತ್ತಿದ್ದು ಬಿಎಸ್ಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಟೆಂಟ್ ರಾಜಕಾರಣ ಮಾಡುತ್ತಿದ್ದಾರೆಯೇ ಹೊರೆತು ಪ್ರಜಾಪ್ರಭುತ್ವದಲ್ಲಿ ಎಸ್ಸಿ - ಎಸ್ಟಿ ಜನರಲ್ಲಿರುವ ಐಕ್ಯತೆ ಮನೋಭಾವ ಹೊಡೆಯಲು ಯತ್ನಿಸುತ್ತಿದೆ. ಇದು ನಡೆಯುವುದಿಲ್ಲ ಎಂದು ಕಿಡಿಕಾರಿದ ಸಿದ್ದಯ್ಯ ರಾಜ್ಯದ್ಯಂತ ಕಾಂಗ್ರೆಸ್ಅನ್ನು ಛಲವಾದಿ-ಮಾದಿಗ ಒಕ್ಕೂಟಗಳು ಒಗ್ಗಟ್ಟಾಗಿ ಬೆಂಬಲಿಸಬೇಕು ಎಂದು ಕರೆಯಿತ್ತರು.
ಜೆಡಿಎಸ್ ಅಭ್ಯರ್ಥಿ ಎಂ.ವೀರಭದ್ರಯ್ಯ ಮತ್ತು ಬಿಎಸ್ಪಿ ಅಭ್ಯರ್ಥಿ ಕೋರಮಂಗಲ ಮುನಿಯಪ್ಪ ಇಬ್ಬರ ಭೂ ಕಬಳಿಕೆಯ ದಾಖಲಾತಿಗಳನ್ನು ಅತಿ ಶೀಘ್ರದಲ್ಲೇ ಜನರ ಮುಂದಿಡುವುದಾಗಿ ತಿಳಿಸಿದ ಅವರು, ಇಬ್ಬರು ಸಮಾನ ಮನಸ್ಕರಾಗಿದ್ದು ಈ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಛಲವಾದಿ-ಮಾದಿಗ ಮುಖಂಡರಾದ ಆರ್. ಧ್ರುವಕುಮಾರ್, ಎಸ್.ಡಿ.ಕೃಷ್ಣಪ್ಪ, ರಾಜಗೋಪಾಲ್, ಬಸವನರಾಜು, ನರಸಿಂಹಮೂರ್ತಿ, ಬಸ್ತಪ್ಪ, ಕೆಂಚರಾಜು ಮತ್ತಿತರರು ಇದ್ದರು.