ಬಿಜೆಪಿಯ ಅಪಪ್ರಚಾರ ನಾಚಿಕೆಗೇಡು: ಗುರುಮೂರ್ತಿ
ಕ.ಪ್ರ.ವಾರ್ತೆ ತಿಪಟೂರು ಏ.29
ಜೆಡಿಎಸ್ ರಾಷ್ಟ್ರಾಧ್ಯಕ್ಷರಾದ ಎಚ್.ಡಿ. ದೇವೇಗೌಡರು ತಾಲೂಕಿನಲ್ಲಿ ಒಕ್ಕಲಿಗರು ಹಾಗೂ ಹಿಂದುಳಿದ ಕುರುಬ ಸಮುದಾಯ ಬಿಜೆಪಿಗೆ ಬೆಂಬಲಿಸಲು ಹೇಳಿದ್ದಾರೆಂದು ಬಿಜೆಪಿಯ ಕೆಲ ಕಾರ್ಯಕರ್ತರು ಮತ್ತು ಮುಖಂಡರುಗಳು ತಾಲ್ಲೂಕಿನಾದ್ಯಂತ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಇದು ಮತ ಯಾಚಿಸಲು ನಡೆಸುತ್ತಿರುವ ಉನ್ನಾರವಾಗಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಗುರುಮೂರ್ತಿ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿಪಟೂರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಭೀತಿಯನ್ನು ಎದುರಿಸುತ್ತಿದ್ದು, ಚುನಾವಣಾ ಪ್ರಚಾರದಲ್ಲಿ ಮಾಜಿ ಪ್ರಧಾನಿ ಹೆಸರನ್ನು ದುರುಪಯೋಗಪಡಿಸುವ ಮೂಲಕ ಮತದಾರರನ್ನು ದಾರಿ ತಪ್ಪಿಸುತ್ತಿರುವುದು ನೋಡಿದರೆ ತಾಲೂಕಿನಲ್ಲಿ ಬಿಜೆಪಿ ಶೋಚನೀಯ ಸ್ಥಿತಿ ತಲುಪುತ್ತಿರುವುದು ಗೊತ್ತಾಗುತ್ತಿದೆ. ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು ರಾಜ್ಯದಲ್ಲಾಗಲಿ, ಜಿಲ್ಲೆಯಲ್ಲಾಗಲಿ, ತಾಲೂಕು ಅಥವಾ ಬೂತ್ ಮಟ್ಟದಲ್ಲಾಗಲಿ ಬಿಜೆಪಿಯೊಂದಿಗೆ ಚುನಾವಣಾ ಪೂರ್ವದ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಕೊನೆ ಉಸಿರಿರುವವರೆಗೆ ಕೋಮುವಾದಿ ಬಿಜೆಪಿಗೆ ಬೆಂಬಲಿಸುವುದಿಲ್ಲ. ಆದ್ದರಿಂದ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ಯಾವುದೇ ಗೊಂದಲಕ್ಕೊಳಗಾಗಬಾರದೆಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
ನಿರ್ಧಾರಿತ ನಾಯಕರಾಗಿರುವ ಎಚ್.ಡಿ.ಕುಮಾರಸ್ವಾಮಿಯವರು 20 ತಿಂಗಳು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಜನಪರ ಯೋಜನೆಗಳು, ಉತ್ತಮ ಆಡಳಿತ ಹಾಗೂ ಈಗಿನ ಪಕ್ಷದ ಚುನಾವಣಾ ಪ್ರಣಾಳಿಕೆ ಎಲ್ಲಾ ವರ್ಗದವರು ಆಶೋತ್ತರಗಳನ್ನು ಈಡೇರಿಸುವಂತಹ ಮತ್ತು ರಾಜ್ಯವನ್ನು ನಂ.1 ಮಾಡುವಂತದ್ದಾಗಿದೆ. ಆದ್ದರಿಂದ ತಾಲೂಕಿನ ಜೆಡಿಎಸ್ನ ಎಲ್ಲಾ ಕಾರ್ಯಕರ್ತರು, ಮುಖಂಡರು ಎಚ್ಡಿಕೆಯವರನ್ನು ಮತ್ತೆ ರಾಜ್ಯಕ್ಕೆ ಮುಖ್ಯಮಂತ್ರಿ ಮಾಡುವ ನಿಟ್ಟಿನಿಂದ ಜೆಡಿಎಸ್ ಅಭ್ಯರ್ಥಿ ಎಂ.ಲಿಂಗರಾಜು ಜಕ್ಕನಹಳ್ಳಿಯವರಿಗೆ ಬಹುಮತ ಸಿಗುವಂತೆ ಕಾರ್ಯೋನ್ಮುಖರಾಗಿ ಎಂದು ಗುರುಮೂರ್ತಿ ಮನವಿ ಮಾಡಿದ್ದಾರೆ.