ಹುಳಿಯಾರಿನಲ್ಲಿ ಕೆಜೆಪಿ ಪ್ರಚಾರ
ಕ.ಪ್ರ.ವಾರ್ತೆ ಹುಳಿಯಾರು ಏ.29
ವಿಧಾನಸಭಾ ಚುನಾವಣಾ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಎಲ್ಲಾ ಪಕ್ಷಗಳ ನಾಯಕರು ಪೈಪೋಟಿಯುತ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಭ್ಯರ್ಥಿ ಜೆ.ಸಿ. ಮಾಧುಸ್ವಾಮಿ ತಮ್ಮ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಪ್ರಚಾರದಲ್ಲಿ ಧುಮುಕಿದ್ದು, ಸೋಮವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಚಾರ ಗರಿಗೆದರಿತ್ತು.
ಜೆ.ಸಿ.ಮಾಧುಸ್ವಾಮಿಯವರು ಬಸ್ ನಿಲ್ದಾಣದ ಪ್ರತಿ ಅಂಗಡಿಗಳಿಗೆ ತೆರಳಿ ತಮ್ಮ ಪಕ್ಷದ ತೆಂಗಿನಕಾಯಿ ಗುರುತಿಗೆ ಓಟು ಕೊಡಿ ಎಂದು ಮತಯಾಚಿಸಿದರೆ, ಕೆಜೆಪಿ ಕಾರ್ಯಕರ್ತರು ತಮ್ಮ ನಾಯಕ ಮಾಧುಸ್ವಾಮಿ ಅವರಿಗೆ ಮತ ನೀಡಿ. ಅವರನ್ನು ಗೆಲ್ಲಿಸುವ ಮೂಲಕ ಚಿ.ನಾ.ಹಳ್ಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಕಾರ್ಯಕ್ಕೆ ಮುಂದಾಗಿ ಎಂದು ಮತಯಾಚಿಸುತ್ತಿದ್ದರು. ಚುನಾವಣಾ ಪ್ರಚಾರದಲ್ಲಿ ಗ್ರಾ.ಪಂ.ಸದಸ್ಯರಾದ
ಅಶೋಕ್ ಬಾಬು, ಜಹೀರ್ಸಾಬ್, ಗೀತಾ, ಗ್ರಾ.ಪಂ. ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಕೆಂಕೆರೆ ಶಿವಕುಮಾರ್, ಎಟಿಎನ್ ಮಂಜು, ಸ್ಟುಡಿಯೋ ದುರ್ಗರಾಜು, ಬಡ್ಡಿಪುಟ್ಟಣ್ಣ, ಕಾರ್ಗಿಲ್ ಸತೀಶ್, ಮುರುಳಿ, ವಕೀಲರಾದ ಗುರುರಾಜ್, ರಾಜಶೇಖರ್ ಸೇರಿದಂತೆ ಅಪಾರ ಸಂಖ್ಯೆ ಕಾರ್ಯಕರ್ತರು ನೆರೆದಿದ್ದರು.