ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

200ಕ್ಕೂ ಹೆಚ್ಚು ಕಾರ್ಯಕರ್ತರು ಕೆಜೆಪಿಗೆ

Rashmi Kasaragodu
Updated On : 1 May 2013, 12:09 pm

ಉಳಿದ ಪಕ್ಷಗಳು ವೇಸ್ಟ್, ಕಾಂಗ್ರೆಸ್ ಬೆಸ್ಟ್


ಕ.ಪ್ರ.ವಾರ್ತೆ   ತುರುವೇಕೆರ್ಣೆ ಏ. 30
ನೋಡ್ರಣ್ಣಾ ಕೆಜೆಪಿ, ಬಿಜೆಪಿ , ಜೆಡಿಎಸ್ ಅಂತ ಮತ ನೀಡ್ಬೇಡಿ. ಅವೆಲ್ಲಾ ವೇಸ್ಟ್. ಯಾಕಂದ್ರೆ ಅವಕ್ಕೆ ಆಡಳಿತ ಮಾಡಿದ ಅನುಭವವಿಲ್ಲ. ಮಾಡಿದರೂ ಸಹ ಬರೀ ಹಗರಣಗಳಲ್ಲಿ ಸಿಲುಕಿ ರಾಜ್ಯದ ಮಾನ ಮರ್ಯಾದೆಯನ್ನು ಮೂರಾಬಟ್ಟೆ ಮಾಡಿವೆ. ಅದಕ್ಕೇ ನೀವೆಲ್ಲಾ ಕಾಂಗ್ರೆಸ್ ಬೆಸ್ಟ್ ಅಂತ ಓಟ್ ಮಾಡಿ. ರಾಜ್ಯದಲ್ಲಿ ಕಾಂಗ್ರೆಸ್ ಜನಸಾಮಾನ್ಯರ ನಾಡಿ ಮಿಡಿತ, ರೈತರ ನಾಡಿ ಮಿಡಿತ ಅರಿತು ಆಡಳಿತ ಮಾಡುತ್ತೆ. ಕಾಂಗ್ರೆಸ್ಗೆ ಮತ ನೀಡಿ ನೆಮ್ಮದಿಯ ಆಡಳಿತ ಪಡೆಯಿರಿ...
 ಹೀಗೆಂದು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮತದಾರರರನ್ನು ವಿನಂತಿಸಿಕೊಂಡಿದ್ದು ಮಾಜಿ ಸಚಿವ ಹಾಗೂ ಕಾಂಗ್ರೆಸ್ನ ಮುಖಂಡ ಡಿ.ಕೆ.ಶಿವಕುಮಾರ್. ಕ್ಷೇತ್ರದ ಮಾಯಸಂದ್ರ ಹಾಗೂ ತುರುವೇಕೆರೆಯಲ್ಲಿ ರೋಡ್ ಶೋನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಆಡಳಿತ ಹೇಸಿಗೆ ತರಿಸಿದೆ. ಬಿಜೆಪಿ ಎಂಬ ಕೆಟ್ಟ ಸರ್ಕಾರ ಬರಲು ಕಾರಣ ಎಚ್.ಡಿ.ಕುಮಾರಸ್ವಾಮಿಯವರೇ. ಅಧಿಕಾರದ ದುರಾಸೆಯಿಂದಾಗಿ ಆಡಿದ ಮಾತಿಗೆ ಮೋಸ ಮಾಡಿದರು. ಬಿಜೆಪಿಯಿಂದ ಅಧಿಕಾರ ಪಡೆಯುವಾಗ ಇದ್ದ  ಸಂತೋಷ ಬಿಟ್ಟು ಕೊಡುವಾಗ ಇರಲಿಲ್ಲ. ಅಧಿಕಾರ ಎಲ್ಲಿ ಬಿಟ್ಟು ಹೋಗುವುದೋ ಎಂಬ ದುರಾಸೆಯಿಂದ  ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದ್ದರಿಂದ ವಚನಭ್ರಷ್ಟ ಎಂಬ ಪಟ್ಟ ಹೊತ್ತು ಅಧಿಕಾರವನ್ನೂ ಕಳೆದು ಕೊಂಡರು. ಇಂದು ಬಿಜೆಪಿ  ದುರಾಡಳಿತ ರಾಜ್ಯಕ್ಕೆ ಬಂದಿದೆ ಎಂದರೆ ಅದಕ್ಕೆ ಕಾರಣ ಕುಮಾರಸ್ವಾಮಿ ಎಂದು ನೇರವಾಗಿ ಆರೋಪಿಸಿದರು.
ಅಪ್ಪ ಮಕ್ಕಳ ಪಕ್ಷ: ರಾಜ್ಯದ ಜನರು ಬಿಜೆಪಿಯ ಆಡಳಿತ ಕಂಡು ಕೋಪ ಗೊಂಡಿದ್ದಾರೆ. ಅವರು ಮಾಡಿದ ದುರಾಡಳಿತಕ್ಕೆ ರಾಜ್ಯದ ಜನತೆ ಇಂದು ಕೇವಲ 30 ಸ್ಥಾನಕ್ಕೆ ಇಳಿಸಲಿದ್ದಾನೆ. ಇನ್ನು ಜೆಡಿಎಸ್ ಕತೆ ಹೇಳುವುದೇ ಬೇಡ ಬಿಡಿ. ಅದು ಅಪ್ಪ ಮಕ್ಕಳ ಪಕ್ಷ. ತಮ್ಮಿಬ್ಬರು ಮಕ್ಕಳ ಪೈಕಿ ಯಾರನ್ನು ಮುಖ್ಯಮಂತ್ರಿ ಮಾಡುವುದು ಎಂಬ ಚಿಂತೆಯಲ್ಲೇ ದೇವೇಗೌಡರು ಕಾಲ ಕಳೆಯುತ್ತಿದ್ದಾರೆ ವಿನಃ ರಾಜ್ಯದ ಜನತೆಯ ಹಿತ ಕಾಪಾಡಬೇಕು ಎಂಬ ಚಿಂತೆ ಅವರನ್ನು ಕಾಡುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಸರ್ಕಾರ ಮುಖ್ಯ: ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾನು ಮುಖ್ಯಮಂತ್ರಿಯಾಗ್ತೇನೋ, ಬೇರೆಯವರು ಮುಖ್ಯಮಂತ್ರಿ ಆಗ್ತಾರೋ ಅದೆಲ್ಲಾ ಗೌಣ.
ಮೊದಲು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬಿಜೆಪಿ ದುಷ್ಟ ಆಡಳಿತವನ್ನು ಕೊನೆಗಾಣಿಸಲು ಮುಂದಾಗಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.
ಮನೆ ಮಗಳಂತೆ ಸ್ಪೀಕರಿಸಿ:  ಕ್ಷೇತ್ರ ಅಭ್ಯರ್ಥಿ ಗೀತಾ ರಾಜಣ್ಣ ಮಾತನಾಡಿ ಕ್ಷೇತ್ರದಲ್ಲಿ ಶಾಂತಿ ನೆಲೆಸಿ ಪ್ರಾಮಾಣಿಕ ಆಡಳಿತ ನಡೆಸಲು ತಮ್ಮನ್ನು ಬೆಂಬಲಿಸಬೇಕು ಎಂದು ವಿನಂತಿಸಿಕೊಂಡರು.
ಈ ಕ್ಷೇತ್ರದಲ್ಲಿ ಈ ಹಿಂದೆ ಮಹಿಳೆಯರಿಗೆ ಅವಕಾಶ ಸಿಕ್ಕಿರಲಿಲ್ಲ. ಈಗ ಮಹಿಳೆಯರಿಗೆ ಅಧಿಕಾರ ಮಾಡುವ ಅವಕಾಶವನ್ನು ಕಾಂಗ್ರೆಸ್ ಕಲ್ಪಿಸಿದೆ. ಕ್ಷೇತ್ರದ ಮಹಿಳಾ ಮತದಾರರು ತಮ್ಮನ್ನು ಮನೆ ಮಗಳಂತೆ ಸ್ಪೀಕರಿಸಿ ಹರಸಬೇಕು ಎಂದು ವಿನಂತಿಸಿಕೊಂಡರು.
ಮಾಜಿ ಶಾಸಕ ಹಾಗೂ ಕೆಪಿಸಿಸಿ ಸದಸ್ಯ ಎಸ್.ರುದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್. ಶಿವರಾಜು, ಜಿಲ್ಲಾ ಪಂಚಾಯ್ತಿ ಸದಸ್ಯ ಉಗ್ರಯ್ಯ, ಯುವ ಮುಖಂಡ ಬಿ.ಎಸ್. ವಸಂತಕುಮಾರ್, ವೆಂಕಟೇಶ್ ಮೂರ್ತಿ, ಕೆಂಪರಾಜು, ಹಿರಿಯ ಮುಖಂಡ ಟಿ.ಎಸ್.ದಾನಿಗೌಡ, ಸಿ ಎಸ್ ಪುರ ಕ್ಷೇತ್ರದ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ಟಿ.ಎಂ.ಗೌಡ, ಎಸ್ಸಿ ಘಟಕದ ಅಧ್ಯಕ್ಷ ಕೃಷ್ಣಕಾಂತ್, ದಂಡಿನಶಿವರ ಗಂಗಾಧರ್ಗೌಡ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಹನುಮಂತಯ್ಯ, ಮಾಯಸಂದ್ರ ಹೋಬಳಿ ಅಧ್ಯಕ್ಷ ಚಂದ್ರಶೇಖರ್, ಮಾಯಸಂದ್ರ ಸುಬ್ರಹ್ಮಣ್ಯ ಮೊದಲಾದ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement