ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಭಿವೃದ್ಧಿಯಲ್ಲಿ ನಮ್ಮ ಗುರಿ ಮೊದಲ ಸ್ಥಾನ

Rashmi Kasaragodu
Updated On : 1 May 2013, 12:08 pm

ಕ.ಪ್ರ.ವಾರ್ತೆ   ಶಿರಾ   ಏ. 30
ದೇಶದಲ್ಲಿ ಅಭಿವೃದ್ಧಿ ಸ್ಥಾನದಲ್ಲಿ ಈಗ ನಾವು 2ನೇ ಸ್ಥಾನದಲ್ಲಿದ್ದೇವೆ. ನಮ್ಮ ಗುರಿ ಮೊದಲನೆ ಸ್ಥಾನ. ಈ ಭಾರಿಯೂ  ರಾಜ್ಯದ ಜನತೆ ಬಿಜೆಪಿ ಬೆಂಬಲಿಸಿ ಅಭಿವೃದ್ಧಿಗೆ ಜೊತೆಯಾಗಬೇಕೆಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದರು.
ಅವರು ಪಟ್ಟಣದ ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರದಲ್ಲಿ ಬಿಜೆಪಿ ಆಯೋಜಿಸಿದ್ದ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕರ್ನಾಟಕದಲ್ಲಿ ಮೇ 5 ರ ನಂತರ ಮತ್ತೆ ಬಿಜೆಪಿಯ ಹೊಸ ಸರ್ಕಾರ ನಿಶ್ಚಿತ. ನಾನೇ ಮುಂದಿನ ಮುಖ್ಯಮಂತ್ರಿ ಎಂದ ಶೆಟ್ಟರ್ ಅವರು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಕೆ.ಮಂಜುನಾಥ್ ಅವರನ್ನು ಗೆಲ್ಲಿಸಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೊಡ್ಡ ಪ್ರಮಾಣದ ಅಭಿವೃದ್ದಿ ನಿರೀಕ್ಷಿಸಿ ಎಂದರು.
ಕಾಂಗ್ರೆಸ್ 50 ವರ್ಷದಲ್ಲಿ ಮಾಡದ ಸಾಧನೆಯನ್ನು ಬಿಜೆಪಿ ಕೇವಲ 5 ವರ್ಷದಲ್ಲಿ ಮಾಡಿ ತೋರಿಸುವ ಮೂಲಕ ಜನರ ಮನ ಗೆದ್ದಿದೆ ಎಂದ ಅವರು ಕೇವಲ 25 ರಿಂದ 35 ಸಾವಿರ ಕೋಟಿಗಷ್ಟೆ ಮೀಸಲಾಗಿದ್ದ ರಾಜ್ಯ ಬಜೆಟನ್ನು 1.17 ಲಕ್ಷ ಕೋಟಿಗೆರಿಸಿದ ಕೀರ್ತಿ ಬಿಜೆಪಿಯದ್ದಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಯಾವುದೇ ಪಕ್ಷದ ಶಾಸಕರಿರಲಿ, 5 ಕೋಟಿ ರು.ಗಳನ್ನು ಅನುದಾನ ನೀಡಿ ಅಲ್ಲಿನ ಕೆರೆಗಳ ಹೂಳನ್ನು ತೆಗೆಯಲು ಕ್ರಮ ಕೈಗೊಂಡಿದ್ದೇನೆ ಎಂದರು.
ರೈತರಿಗೆ ಪ್ರತ್ಯೇಕ ಬಜೆಟ್: ರೈತರಿಗೆ ಪ್ರತ್ಯೇಕ ಬಜೆಟ್ ನೀಡಿದ ಪ್ರಥಮ ರಾಜ್ಯ ಸರ್ಕಾರವಾಗಿದ್ದು, ರೈತರಿಗಾಗಿ ಬಡ್ಡಿ ರಹಿತ ಸಾಲ ನೀಡಿ ಕೃಷಿಗೆ ಉತ್ತೇಜನ ನೀಡಿರುವುದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದರು.
ಕಾಂಗ್ರೆಸ್ನಲ್ಲಿ ಕಚ್ಚಾಟವಿದ್ದು ಅವರವರೆ ಕಾಲೆಳೆದು ಸೋಲಲಿದ್ದು ಬಹುಮತ ಅಸಾಧ್ಯವೆನ್ನುವಂತಾಗಿದೆ. ಸೋಲುವ ಭೀತಿಯಿಂದಲೇ ಇದುವರೆಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸುವ ಧೈರ್ಯ ಮಾಡಿಲ್ಲ. ಆದರೆ ಒಂದೆಡೆ ಸಿದ್ದರಾಮಯ್ಯ, ಮತ್ತೊಂದೆಡೆ ಡಾ.ಜಿ.ಪರಮೇಶ್ವರ್, ಇನ್ನೊಂದೆಡೆ ಖರ್ಗೆ, ಶಾಮನೂರು ಶಿವಶಂಕರ್,  ಜಾಫರ್ ಷರೀಫ್ ತಾವೇ ಮುಖ್ಯಮಂತ್ರಿ ಎಂದು ಬಿಂಬಿಸತೊಡಗಿದ್ದಾರೆ. ಹೀಗೆ ಒಬ್ಬರ ಕಾಲೊಬ್ಬರು ಎಳೆಯತೊಡಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನಾವಿಕರಿಲ್ಲದ ದೋಣಿಯಾಗಿದೆ ಎಂದರು.
12 ಸಾವಿರ ಮನೆ: ಶಿರಾ ವಿಧಾನಸಭಾ ಕ್ಷೇತ್ರಕ್ಕೆ 12 ಸಾವಿರ ಮನೆಗಳನ್ನು ವಿವಿಧ ಯೋಜನೆಗಳಲ್ಲಿ ನೀಡಲಾಗಿದೆ. ಮದಲೂರು ಕೆರೆ ಯೋಜನೆಗೆ ಮಂಜೂರಾತಿ ನೀಡಿದ್ದು ಬಿಜೆಪಿ ಸರ್ಕಾರವೆ ಮರೆಯಬೇಡಿ ಎಂದ ಅವರು ರಾಜ್ಯದಲ್ಲಿ 16.50 ಲಕ್ಷ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಯಡಿ ಬಾಂಡ್ ನೀಡಿದ್ದೇವೆ. 23 ಸಾವಿರ ದಿನಗೂಲಿ ನೌಕರರನ್ನು ಕಾಯಂ ಮಾಡಿದ್ದೇವೆ. 23 ನೀರಾವರಿ ಯೋಜನೆಗಳನ್ನು 10 ಸಾವಿರ ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಿದ್ದೇವೆ. ರಾಜ್ಯದಲ್ಲಿ ಉತ್ತಮ ರಸ್ತೆ ನಿರ್ಮಾಣ ಮಾಡಿದ್ದೇವೆ. ನವಗ್ರಾಮ ಯೋಜನೆಯಡಿ ಪ್ರತಿ ತಾಲೂಕಿನಲ್ಲಿ 50 ಕಿ.ಮೀ. ರಸ್ತೆ ನಿರ್ಮಿಸಿದ್ದೇವೆ. ಎಸ್.ಸಿ, ಎಸ್.ಟಿ. ಜನಾಂಗದ ಅಭಿವೃದ್ಧಿಗೆ 23 ಸಾವಿರ ಕೋಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 1200 ಕೋಟಿ ಅನುದಾನ ಖರ್ಚು ಮಾಡಿದ್ದು, ಅಲ್ಪಸಂಖ್ಯಾತರ ಸಲುವಾಗಿ 300 ಕೋಟಿ ರು.ಗಳನ್ನು ನೀಡಿದ್ದೇವೆ. ಮುಸ್ಲಿಮರ ಹೆಸರೇಳುವ ಕಾಂಗ್ರೆಸ್ ಇದುವರೆಗೂ ಎಷ್ಟು ಕೋಟಿ ನೀಡಿದೆ ಎಂದರು.
ಸಾಧನೆ ನೋಡಿ ಗೆಲ್ಲಿಸಿ: ಶಿರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಕೆ.ಮಂಜುನಾಥ್ ಮಾತನಾಡಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ನೋಡಿ ಈ ಭಾರಿಯೂ ಬಿಜೆಪಿಗೆ ಗೆಲ್ಲಿಸಿ. ನನಗೂ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿ, ರಾಜ್ಯ ಸರ್ಕಾರ 800 ಕೋಟಿಗಳಿಗೂ ಹೆಚ್ಚು ಹಣ ಶಿರಾ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆ ಮಾಡಿದೆ. ಕೇವಲ ನೀರಾವರಿ ವಿಷಯ ಹಿಡಿದುಕೊಂಡು ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಮದಲೂರು ಕೆರೆ ಯೋಜನೆಗೆ ಬಿಜೆಪಿ ಸರ್ಕಾರವೆ ಅನುಮೋದನೆ ಕೊಟ್ಟಿರುವುದು ಮರೆಯಬೇಡಿ. ಈ ಭಾರಿ ನನಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಚಿತ್ರದುರ್ಗ ಕ್ಷೇತ್ರದ ಸಂಸದ ಜನಾರ್ದನ ಸ್ವಾಮಿ ಮಾತನಾಡಿ ರಾಜ್ಯ, ದೇಶದ ಭದ್ರತೆಗೆ ಮತ್ತು ಅಭಿವೃದ್ಧಿಗೆ ಬಿಜೆಪಿ ಅನಿವಾರ್ಯವಾಗಿದ್ದು, ಮತದಾರರು ಗಂಭೀರವಾಗಿ ಯೋಚನೆ ಮಾಡಿ ಬಿಜೆಪಿಗೆ ಬೆಂಬಲಿಸಿ ಎಂದರು.
ಮಹಿಳಾ  ಅಧ್ಯಕ್ಷೆ ಲತಾ ಕೃಷ್ಣ, ಪಡಿರಮೇಶ್, ತುಳಸಿರಾಂ, ಕೃಷ್ಣಮೂರ್ತಿ, ನಗರಸಭೆ ಸದಸ್ಯೆ ಸುಜಾತ ಚಂದ್ರಶೇಖರ್, ತುಳಸಿರಾಂ, ಸೇರಿದಂತೆ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement