ಮೊದಲು ಮತದಾರರಿಗೆ ಗೌರವ, ನಂತರ ಅಭಿವೃದ್ಧಿಯ ಮಾತು: ಮಸಾಲಾ ಜಯರಾಂ
ಕ.ಪ್ರ.ವಾರ್ತೆ ತುರುವೇಕೆರ್ಣೆ ಏ. 30
ಮೊದಲು ಕ್ಷೇತ್ರದ ಜನರು ಹಾಗೂ ಮತದಾರರನ್ನು ಗೌರವದಿಂದ ಕಾಣುತ್ತೇನೆ. ಕ್ಷೇತ್ರದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರಿಂದ ಹಿಡಿದು ಇತರೆ ಸಿಬ್ಬಂದಿಗೆ ಗೌರವ ನೀಡುತ್ತೇನೆ. ಜನರಿಗೆ ಗೌರವ ನೀಡಿದರೆ ಜನರೂ ನಮಗೆ ಗೌರವ ನೀಡುತ್ತಾರೆ. ಮೊದಲು ನನ್ನಿಂದಲೇ ಈ ಕೆಲಸ ಆರಂಭವಾಗಲಿದೆ ಎಂದು ಕೆಜೆಪಿ ಅಭ್ಯರ್ಥಿ ಮಸಾಲಾ ಜಯರಾಂ ಹೇಳಿದರು.
ಕ್ಷೇತ್ರದ ಚುನಾವಣಾ ಪ್ರಚಾರ ಮಾಡುತ್ತಿರುವ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕ್ಷೇತ್ರದಲ್ಲಿ ಕಳೆದ ಹತ್ತು ಇಪ್ಪತ್ತು ವರ್ಷಗಳಿಂದ ಮತದಾರ ಪ್ರಭುಗಳಿಗೆ ಗೌರವವೇ ಇಲ್ಲದಾಗಿದೆ. ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳು ಮತ ನೀಡಿ ಗೆಲುವಿಗೆ ಕಾರಣವಾಗಿದ್ದ ಮತದಾರರನ್ನು ಏಕವಚನದಲ್ಲಿ ಮಾತನಾಡಿಸುವ ಪರಿಪಾಠ ಮುಂದುವರೆಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದಿದ್ದ ಜಗ್ಗೇಶ್ ಕೆಲವೇ ದಿನಗಳಲ್ಲಿ ಕ್ಷೇತ್ರದ ಮತದಾರನ ಮನದಾಳ ಅರಿಯದೇ ಶಾಸಕ ಸ್ಥಾನಕ್ಕೆ ರಾಜಿನಾಮೆ ಇತ್ತು ಮತದಾರರಿಗೆ ಅವಮಾನ ಮಾಡಿದರು. ಇತ್ತ ಕಳೆದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕೃಷ್ಣಪ್ಪನವರು ಮತದಾರರನ್ನು ಯಾವಾಗಲೂ ಏಕವಚನದಲ್ಲೇ ಮಾತನಾಡಿಸುತ್ತಾರೆ. ತಮ್ಮ ಮನೆಯ ಆಳುಗಳೇನೋ ಎಂಬ ಭಾವನೆಯಿಂದ ವರ್ತಿಸುತ್ತಾರೆ. ಶಾಸಕರಾದವರಿಗೆ ಇಡೀ ಕ್ಷೇತ್ರಕ್ಕೇ ತಾವು ಶಾಸಕರು ಎಂಬ ಭಾವನೆ ಇಲ್ಲ. ಕ್ಷೇತ್ರದ ಜನಸಾಮಾನ್ಯರನ್ನು ಅವಮಾನಿಸುವ ಶಾಸಕರಿಗೆ ಜನರು ಈ ಬಾರಿಯ ಚುನಾವಣೆಯಲ್ಲಿ ತಕ್ಕಶಾಸ್ತಿ ಮಾಡಲಿದ್ದಾರೆ ಎಂದು ಮಸಾಲಾ ಜಯರಾಂ ಹೇಳಿದರು.