ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನನ್ನ ಗುರಿಯೇನಿದ್ದರೂ ಕಾಂಗ್ರೆಸ್ ಗೆಲವೊಂದೇ'

Rashmi Kasaragodu
Updated On : 6 Aug 2013, 12:51 pm

ರಾಮನಗರ:  ಹಳೆಯ ನಿಲವುಗಳನ್ನೆಲ್ಲಾ ನಾನೀಗ ಅರ್ಕಾವತಿ ಹೊಳೆಗೆ ಬಿಟ್ಟಿದ್ದೇನೆ. ಈಗ ನನ್ನ ಗುರಿಯೇನಿದ್ದರೂ ಕಾಂಗ್ರೆಸ್ ಗೆಲವೊಂದೇ. ಅದಕ್ಕಾಗಿ ಯಾರ ಜತೆಗೆ ಬೇಕಾದರೂ ಮಾತುಕತೆ ನಡೆಸಲು, ಯಾರನ್ನು ಬೇಕಾದರೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಿದ್ಧ.
ಇದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣೆಯ ಸಮರದಲ್ಲಿ ಸಹೋದರ ಡಿ.ಕೆ.ಸುರೇಶ್ ಅವರನ್ನು ಕಣಕ್ಕೆ ಇಳಿಸಿ, ಕಾಂಗ್ರೆಸ್ ಪಕ್ಷದ ರಥವನ್ನು ಮುನ್ನಡೆಸುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ.  
ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂದಿರದಲ್ಲಿ ಸೋಮವಾರ ನಡೆದ ಪಕ್ಷದ ಕಾರ್ಯರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಕಾರ್ಯಕರ್ತರು, ರಾಜ್ಯದ ನಾಯಕರು ಹಾಗೂ ಹೈಕಮಾಂಡ್ ಒತ್ತಾಸೆ ಮೇರೆಗೆ ಸುರೇಶ್ ಅಭ್ಯರ್ಥಿಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾರರು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಾಕಷ್ಟು ಅವಕಾಶ ನೀಡಿದ್ದಾರೆ. ಇದೀಗ ಸುರೇಶ್ ಅವರಿಗೊಂದು ಅವಕಾಶ ಕೊಡುವಂತೆ ಮನವೊಲಿಸಿ ಎಂದು ಕಾರ್ಯಕರ್ತರಿಗೆ ತಿಳಿಸಿದರು.  
ಮುಖಂಡರುಗಳು ತಮ್ಮ ಗ್ರಾಮ, ಹೋಬಳಿ ವ್ಯಾಪ್ತಿಯಲ್ಲೇ ಇದ್ದುಕೊಂಡು ಪ್ರಚಾರ ನಡೆಸಬೇಕು. ತಮ್ಮ ಬೂತ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ಬರುವಂತೆ ನೋಡಿಕೊಳ್ಳಬೇಕು. ಹಾಗಾದಲ್ಲಿ ಮಾತ್ರ ಅವರು ನಿಜವಾದ ಮುಖಂಡರಾಗುತ್ತಾರೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಸಚಿವ ಖಾದರ್ ಕರೆ: ರಾಮನಗರ ಜಿಲ್ಲೆಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿಯನ್ನೇ ಆಯ್ಕೆ ಮಾಡಬೇಕು ಎಂದು ಮತದಾರರಲ್ಲಿ ವಿನಂತಿಸುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಬಿಜೆಪಿ ದುರಾಡಳಿತ: 5 ವರ್ಷ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಆಂತರಿಕ ಕಚ್ಚಾಟದಲ್ಲೇ ಕಾಲ ಕಳೆಯಿತೇ ಹೊರತು ಜನಪರ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಈ ಅವಧಿಯಲ್ಲಿ ಒಂದೇ ಒಂದು ಶಾಲೆಯನ್ನೂ ತೆರೆಯಲಿಲ್ಲ. ಜನರನ್ನು ಹಸಿವಿನ ಕೂಪಕ್ಕೆ ದೂಡಿದ ಕೀರ್ತಿ ಬಿಜೆಪಿ ಸರ್ಕಾರದ್ದು ಎಂದು ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಜೆಡಿಎಸ್ ಕಾರಣವಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರವು ಅಲ್ಪ ಸಂಖ್ಯಾತರಿಗೆ ಒಂದು ಸಚಿವ ಸ್ಥಾನ ನೀಡಲಿಲ್ಲ. ಕಾಂಗ್ರೆಸ್ ಪಕ್ಷವು ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ ಎಂದರು.
ಜೆಡಿಎಸ್ ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ. ಎಚ್.ಡಿ.ದೇವೇಗೌಡ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಜೆಡಿಎಸ್ ಜಾತ್ಯತೀತ ನಿಲುವಿಗೆ ವಿದಾಯ ಹೇಳಿದೆ ಎಂದು ಟೀಕಿಸಿದರು.  
ಅಭ್ಯರ್ಥಿ ಡಿ.ಕೆ.ಸುರೇಶ್ ಮಾತನಾಡಿ, ವಿಧಾನ ಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ನಂಬಿಕೆಯಿಂದ ಅವರಿಗೆ ಮತ ನೀಡಿದ್ದೀರಿ. ಆದರೆ ಈ ಬಾರಿ ಯಾವ ಕಾರಣಕ್ಕೆ ಜೆಡಿಎಸ್ಗೆ ಮತ ನೀಡಬೇಕು ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement