ಪತ್ನಿಗೆ ಕಿರುಕುಳ: ದೂರು
ಕೆಜಿಎಫ್: ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಪತಿ ವಿರುದ್ಧ ದೂರು ದಾಖಲಾಗಿರುವ ಘಟನೆ ನಡೆದಿದೆ.
ಬೇತಮಂಗಲ ಪೊಲೀಸ್ ಠಾಣಾ ಕಣ್ಣೂರು ನಿವಾಸಿ ಕೃಷ್ಣಪ್ಪ ಎಂಬವರೊಂದಿಗೆ ಕಳೆದ 7 ವರ್ಷಗಳ ಹಿಂದೆ ಶಾಂತಕುಮಾರಿ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ನಂತರ ಗಂಡ ಹೆಂಡತಿ ಇಬ್ಬರು ಚೆನ್ನಾಗಿ ಸಂಸಾರ ನಡೆಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ.
ಆದರೆ, ಇತ್ತೀಚಿನ ದಿನಗಳಲ್ಲಿ ಪತಿ ಕೃಷ್ಣಪ್ಪ ಮನೆಯಲ್ಲಿ ವಿನಾಕಾರಣ ಜಗಳ ಮಾಡುತ್ತಿದ್ದು ಪತ್ನಿ ಶಾಂತಕುಮಾರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದು, ಕಳೆದ ಶನಿವಾರ ರಾತ್ರಿ 10 ಗಂಟೆಯಲ್ಲಿ ಅದೇ ರೀತಿ ಜಗಳ ಕಾದು ಕೈಗಳಿಂದ ಹಲ್ಲೆ ನಡೆಸಿ ತನ್ನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿ ಸಾಯಿಸಿಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುವುದಾಗಿ ಶಾಂತಕುಮಾರಿ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪತಿ ಕೃಷ್ಣಪ್ಪ ವಿರುದ್ಧ ದೂರು ನೀಡಿದ್ದಾರೆ.