ಪುರಸಭೆ ಮುಖ್ಯಾಧಿಕಾರಿ ಕರ್ತವ್ಯಲೋಪ ವಿರುದ್ಧ ಕ್ರಮ
ಕ.ಪ್ರ.ವಾರ್ತೆ ಕುಣಿಗಲ್ ಆ. 5
ಪಟ್ಣಣದ ನ್ಯಾಯಾಲಯ ಆವರಣದ ಕಾಂಪೌಂಡ್ ಗೋಡೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಮಳಿಗೆಗಳನ್ನು ಕೂಡಲೆ ತೆರವುಗೊಳಿಸುವಂತೆ, ನ್ಯಾಯಾಲಯದ ಸೂಕ್ತ ಆದೇಶವಿದ್ದರೂ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯವಹಿಸಿರುವ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಕರ್ತವ್ಯಲೋಪದ ಕ್ರಮ ಕೈಗೊಳ್ಳಲು ಸೋಮವಾರ ನಡೆದ ವಕೀಲರ ಸಂಘದ ಮಾಸಿಕಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಮಾಡಲಾಯಿತೆಂದು ಸಂಘದ ಅಧ್ಯಕ್ಷ ದಯಾನಂದ್ ತಿಳಿಸಿದರು.
ಪಟ್ಟಣದ ನ್ಯಾಯಾಲಯ ಆವರಣದ ಕಾಂಪೌಂಡ್ ಗೋಡೆ ಒತ್ತುವರಿ ಮಾಡಿಕೊಂಡು ಮಳಿಗೆ ನಿರ್ಮಿಸಲಾಗಿರುವ ಬಗ್ಗೆ, ಕನ್ನಡಪ್ರಭ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ, ಬಹುತೇಕ ಯುವ ವಕೀಲರು ನ್ಯಾಯಾಲಯ ಆವರಣ ಒತ್ತುವರಿಯಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಒತ್ತುವರಿ ತೆರವು ಪ್ರಕ್ರಿಯೆ ಕೂಡಲೆ ಕೈಗೊಳ್ಳುವಂತ ಆಗ್ರಹಿಸಿದ್ದರು. ಸೋಮವಾರ ಮಧ್ಯಾಹ್ನ ಒಂದು ಗಂಟೆಗೆ ಸಂಘದ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ, ಪತ್ರಿಕಾ ವರದಿಯನ್ನು ಉಲ್ಲೇಖಿಸಿ ವಿಷಯ ಪ್ರಸ್ತಾಪವಾಯಿತು.
ತೀವ್ರ ಆಕ್ರೋಶ: ಸಭೆಯಲ್ಲಿ ಹಾಜರಿದ್ದ ವಕೀಲರು ನ್ಯಾಯಾಲಯ ಆವರಣವನ್ನೇ ಒತ್ತುವರಿ ಮಾಡಿಕೊಂಡಿರುವವರ ಬಗ್ಗೆಯಾಗಲಿ, ಕಟ್ಟಡ ನಿರ್ಮಿಸಿದ್ದು ಅದನ್ನು ತೆರವುಗೊಳಿಸುವುದರ ಬಗ್ಗೆಯಾಗಲಿ ಜಿಲ್ಲಾ ನ್ಯಾಯಾಧೀಶರ ಕಾರ್ಯಾಲಯದ ಪತ್ರ ಹಾಗೂ ಉಚ್ಚನ್ಯಾಯಾಲಯ ಸೂಕ್ತ ಆದೇಶ ನೀಡಿದ್ದರೂ, ಪುರಸಭೆ ಮುಖ್ಯಾಧಿಕಾರಿ ಒತ್ತುವರಿದಾರರಿಗೆ ನೊಟೀಸ್ ಜಾರಿಗೊಳಿಸುವಲ್ಲಿ ವಿಫಲವಾಗಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪುರಸಭೆ ಮುಖ್ಯಾಧಿಕಾರಿಗಳು ನೊಟೀಸ್ ಜಾರಿ ಪ್ರಕ್ರಿಯೆ ವಿಳಂಬದ ಹಿನ್ನೆಲೆಯಲ್ಲಿ ಕೆಲಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥ ಸಾಧನೆ ಮಾಡಿಕೊಂಡು ದಂಧೆಗೆ ಇಳಿದಿರುವ ಬಗ್ಗೆಯೂ ಕೆಲ ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದು, ಒತ್ತುವರಿ ತೆರವು ಪ್ರಕ್ರಿಯೆ ವಿಳಂಬದ ಹಿನ್ನೆಲೆಯಲ್ಲಿ ಇಡೀ ಪ್ರಕ್ರಿಯೆಯನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೂ ಒತ್ತಾಯಿಸಿದರು.
ಮನವಿ ಸಲ್ಲಿಸಲು ನಿರ್ಧಾರ: ಈ ಕುರಿತು ಕೆಲ ಕಾಲ ಚರ್ಚೆ ನಡೆದು ಅಂತಿಮವಾಗಿ, ನ್ಯಾಯಾಲಯ ಆವರಣದ ಕಾಂಪೌಂಡ್ ಗೋಡೆ ಮಳಿಗೆಗಳನ್ನು ತೆರೆವುಗೊಳಿಸಲು ಜಿಲ್ಲಾ ಸತ್ರ ನ್ಯಾಯಾಧೀಶರನ್ನು, ಆಡಳಿತಾತ್ಮಕ ನ್ಯಾಯಾಧೀಶರನ್ನು, ವಕೀಲರ ಸಂಘದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸುವುದು, ಸಂಬಂಧಪಟ್ಟ ಒತ್ತುವರಿ ಪ್ರಕ್ರಿಯೆಗೆ ನೊಟೀಸ್ಜಾರಿ ಮಾಡುವಲ್ಲಿ ನಿರ್ಲಕ್ಷ್ಯವಹಿಸಿರುವ ಪುರಸಭೆ ಮುಖ್ಯಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಕಾರಣಕೇಳಿ ನೊಟೀಸ್ ಜಾರಿ ಮಾಡುವುದು, ಸದರಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಘವು ಒಮ್ಮತದ ತೀರ್ಮಾನ ಕೈಗೊಂಡಿದೆ ಎಂದು ಸಂಘದಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ವಕೀಲರಾದ ಕೆ.ಎಂ.ತಿಮ್ಮಪ್ಪ, ನರಸಿಂಹಯ್ಯ, ಬಸವರಾಜು, ಸುರೇಶ್, ಚಂದ್ರೇಗೌಡ, ಲೋಕೇಶ್ ಸೇರಿದಂತೆ ಇತರೆ ಹಿರಿಯ ಹಾಗೂ ಕಿರಿಯ ವಕೀಲರು ಪಾಲ್ಗೊಂಡಿದ್ದರು.