ಕಲಿಯಲು ವಯಸ್ಸಿನ ಪರಿಧಿ ಇಲ್ಲ
ಕ.ಪ್ರ.ವಾರ್ತೆ ತುಮಕೂರು ಆ. 6
ಕಲಿಕೆಗೆ ವಯಸ್ಸು ಎಂಬುದಿಲ್ಲ. ಎಲ್ಲಾ ಹಂತಗಳಲ್ಲಿ ಕಲಿಕೆ ಇದ್ದೇ ಇರುತ್ತದೆ. ಹೊಸ ಬದಲಾವಣೆಗಳ ಬಗ್ಗೆ ತಿಳುವಳಿಕೆ ಪಡೆಯಲು ಇದು ಸಹಕಾರಿಯಾಗುತ್ತದೆ ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ನಗರದ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆಯ ಸಹಯೋಗದಲ್ಲಿ ಸಹಕಾರ ಸಂಘಗಳ ಚುನಾವಣಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿರುವ ಗೊಂದಲಗಳನ್ನು ನಿವಾರಿಸಿಕೊಳ್ಳಲು ಇಂತಹ ತರಬೇತಿ ಕಾರ್ಯಾಗಾರಗಳು ಸಹಕಾರಿಯಾಗುತ್ತವೆಂದರು.
ಈಡೇರಿಸಲಿ: ಸಹಕಾರಿ ಸಂಘಗಳ ಚುನಾವಣೆ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರು ಜ್ಞಾನ ಪಡೆದುಕೊಳ್ಳಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ರೈತರೊಂದಿಗೆ ನೇರ ಸಂಪರ್ಕ ಹೊಂದಿರುವ ನೌಕರರು ರೈತರು ಮತ್ತು ಸಂಸ್ಥೆಯ ಹಿತದೃಷ್ಟಿಯಿಂದ ತೀರ್ಮಾನ ಕೈಗೊಳ್ಳಬೇಕಾದರೆ ನಿಷ್ಠುರವಾಗಿರಬೇಕಾಗುತ್ತದೆ. ನಾಯಕತ್ವದ ಲಕ್ಷಣ ಹೊಂದಿರುವ ವ್ಯಕ್ತಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಈ ಕಾರ್ಯಾಗಾರ ಸಹಕಾರಿ ಆಂದೋಲನ, ಗುರಿ ಮತ್ತು ಉದ್ದೇಶವನ್ನು ಈಡೇರಿಸುತಂತಾಗಲಿ ಎಂದು ರಾಜಣ್ಣ ಸಲಹೆ ನೀಡಿದರು.
ನೀತಿ ಸಂಹಿತೆ ಪಾಲಿಸಿ: ಸಹಕಾರ ಇಲಾಖೆಯ ಉಪನಿಬಂಧಕ ಎಚ್. ಬಾಲಶೇಖರ್ ಮಾತನಾಡಿ, ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಸಹಕಾರಿ ಸಂಸ್ಥೆಗಳ ಚುನಾವಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಚುನಾವಣಾ ಆಯೋಗ ರಚನೆಯಾಗಿ ಎರಡು ತಿಂಗಳಾಗಿದ್ದು, ಚುನಾವಣಾಧಿಕಾರಿಗಳ ಪಟ್ಟಿ ತಯಾರಾಗಿದ್ದು, ಜಿಲ್ಲೆಯ 231 ಸಹಕಾರಿ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ನೀತಿ ಸಂಹಿತೆಯನ್ನು ಪಾಲನೆ ಮಾಡುವಂತೆ ಸಲಹೆ ನೀಡಿದರು.
ಅಗತ್ಯವಿದೆಯೇ: ಟಿ.ಜಿ.ಎಂ.ಸಿ ಬ್ಯಾಂಕಿನ ಅಧ್ಯಕ್ಷ ಎನ್.ಆರ್. ಜಗದೀಶ್ ಮಾತನಾಡಿ, ಸಹಕಾರಿ ಸಂಘಗಳಿಗೆ ಚುನಾವಣಾ ಆಯೋಗದ ಅಗತ್ಯವಿದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಹೊಸ ನಿಯಮದ ಪ್ರಕಾರ ಚುನಾವಣೆ ನಡೆಸಿದರೆ ಹೆಚ್ಚು ಖರ್ಚು ಸಂಸ್ಥೆಗಳಿಗೆ ಬರಲಿದೆ. ಅಲ್ಲದೆ ಸಹಕಾರಿ ಸಂಸ್ಥೆಗಳ ಚುನಾವಣಾ ಆಯೋಗದ ರಚನೆಯಿಂದ ಸಹಕಾರಿ ಸಂಸ್ಥೆಗಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ. ಆದರೂ ಕೇಂದ್ರ ಸರಕಾರದ ತೀರ್ಮಾನಕ್ಕೆ ತಲೆಬಾಗಲೇ ಬೇಕಾಗಿದೆ ಎಂದರು.
ವೇದಿಕೆಯಲ್ಲಿ ಸಹಕಾರಿ ಯೂನಿಯನ್ನ ಅಧ್ಯಕ್ಷ ಗಂಗಣ್ಣ, ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಂಡಳದ ನಿರ್ದೇಶಕ ಬಿ.ಜಿ. ವೆಂಕಟೇಗೌಡ, ಸಹಕಾರ ಸಂಘಗಳ ನಿವೃತ್ತ ಅಪರ ಉಪನಿಬಂಧಕ ಆರ್.ಎಸ್. ಹುಚ್ಚಾಚಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಜಿ.ಪ್ರಕಾಶ್, ಜಿ. ತಿಪೇಸ್ವಾಮಿ ಮತ್ತಿತರರು ವೇದಿಕೆಯಲ್ಲಿದ್ದರು.