ಜನಪರ ಕಾರ್ಯಕ್ರಮಗಳಿಂದ ಕಾಂಗ್ರೆಸ್ ಗೆಲವು ಖಚಿತ
ಕ.ಪ್ರ.ವಾರ್ತೆ ಕುಣಿಗಲ್ ಆ. 6
ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ, ಸಿಎಂ ಸಿದ್ದರಾಮಯ್ಯನವರು ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭೆಯ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲವಿಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಫಿ ಅಹಮದ್ ವ್ಯಕ್ತಪಡಿಸಿದರು.
ಮಂಗಳವಾರ, ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಎಸ್.ಪಿ. ಮುದ್ದಹನುಮಮೇಗೌಡ ಪಕ್ಷಕ್ಕೆ ಸೇರ್ಪಡೆಗೊಂಡು ಪ್ರಸಕ್ತ ಚುನಾವಣೆಯಲ್ಲಿ ಸಕ್ರಿಯರಾಗುವ ಮೂಲಕ ಪಕ್ಷಕ್ಕೆ ಮತ್ತಷ್ಟು ಹೆಚ್ಚಿನ ಶಕ್ತಿಬಂದಿದ್ದು, ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡರು, ಮುದ್ದುಹನುಮೇಗೌಡ ಸೇರಿದಂತೆ ಎಲ್ಲಾ ನಾಯಕರು ಒಮ್ಮತದ ಶ್ರಮದಿಂದ ಪಕ್ಷ ಈ ಬಾರಿ ಉತ್ತಮ ಸಾಧನೆ ಮಾಡಲಿದೆ ಎಂದ ರು.
ಅನಿತಾ ಏನೂ ಮಾಡಿಲ್ಲ: ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕುಮಾರಸ್ವಾಮಿಯವರು ಈ ಕ್ಷೇತ್ರಕ್ಕೆ ಯಾವ ಕೊಡುಗೆ ನೀಡಿದ್ದಾರೆಂಬುದು ಮತದಾರರಿಗೆ ಚೆನ್ನಾಗಿ ಗೊತ್ತಿದೆ. ಆಯ್ಕೆಯಾದ ನಾಲ್ಕುವರೆ ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಯಾವುದೇ ಸಮಸ್ಯೆಗೆ ಸ್ಪಂದಿಸಿಲ್ಲ. ಇನ್ನು ಹಾಲಿ ಅಭ್ಯರ್ಥಿಯಾಗಿರುವ
ಅನಿತಾಕುಮಾರಸ್ವಾಮಿಯವರ ಕಾರ್ಯವೈಖರಿಯನ್ನು ಈಗಾಗಲೆ ಮಧುಗಿರಿಯ ಜನತೆ ಅನುಭವಿಸಿದ್ದಾರೆ. ಕೇವಲ ಅಧಿಕಾರಕ್ಕಾಗಿ ಮಾತ್ರ ಚುನಾವಣೆಗೆ ನಿಲ್ಲುವ ಕುಮಾರಸ್ವಾಮಿ ಕುಟುಂಬದವರಿಂದ ಕ್ಷೇತ್ರದ ಅಭಿವೃದ್ದಿಗೆ ಕೊಡುಗೆ ಶೂನ್ಯ ಎಂದರು.
ಸಭೆ ಆಯೋಜನೆ: ಇದೇ ಎಂಟರಂದು ಲೋಕಸಭೆ ಉಪಚುನಾವಣೆ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಂಡಿದ್ದು, 13ರಂದು ತಾಲೂಕಿನಾದ್ಯಂತ ಅಭ್ಯರ್ಥಿಯಿಂದ ಪ್ರವಾಸ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿ ಸೇರಿದಂತೆ ಕೇಂದ್ರ ಸಚಿವರ ನೇತೃತ್ವದಲ್ಲಿ ಶೀಘ್ರದಲ್ಲೆ ಬಹಿರಂಗ ಸಭೆ ಆಯೋಜಿಸಲಾಗುವುದೆಂದರು.
ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳಿಂದಾಗಿ ಹಾಗೂ ಹಿಂದಿನ ಚುನಾವಣೆಗಳಲ್ಲಿ ಆದಂತಹ ಕೆಲವು ತಪ್ಪುಗಳನ್ನು ಸರಿಪಡಿಸಿಕೊಂಡು, ಹೊಸ ಉತ್ಸಾಹದಿಂದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನೇತೃತ್ವದಲ್ಲಿ ಲೋಕಸಭೆ ಉಪಚುನಾವಣೆಗಳನ್ನು ಸಮರ್ಥವಾಗಿ ಎದುರಿಸಿ ಎರಡೂ ಲೋಕಸಭೆ ಉಪಚುನಾವಣೆಗಳಲ್ಲಿ ಪಕ್ಷ ಜಯಭೇರಿ ಬಾರಿಸಲಿದೆ ಎಂದರು.
ಭಿನ್ನಾಭಿಪ್ರಾಯ ಬೇಡ: ಕಾಂಗ್ರೆಸ್ ಸೇರ್ಪಡೆಗೊಂಡು ಮೊದಲ ಬಾರಿಗೆ ಕಾಂಗ್ರೆಸ್ ಕಾರ್ಯಾಲದಲ್ಲಿ ಕಾಣಿಸಿಕೊಂಡ ಮಾಜಿ ಶಾಸಕ ಎಸ್.ಪಿ. ಮುದ್ದಹನುಮೇಗೌಡ, ಲೋಕಸಭೆ ಉಪಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯ ಗೆಲವಿಗೆ ಎಲ್ಲಾ ಕಾರ್ಯಕರ್ತರು ಯಾವುದೇ ತರಹದ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಶ್ರಮಿಸಬೇಕಿದೆ.
ತಾವಂತೂ ಸಾಮಾನ್ಯ ಕಾರ್ಯಕರ್ತರಲ್ಲಿ ಕಾರ್ಯಕರ್ತನಾಗಿ ಪಕ್ಷದ ಅಭ್ಯರ್ಥಿಯ ಗೆಲವಿಗೆ ಶ್ರಮಿಸುವುದಾಗಿ ತಿಳಿಸಿದರು.
ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ, ಮುತ್ಸದಿ ರಾಜಕಾರಣಿಗಳಾದವರು ತಮ್ಮ ಪ್ರತಿಷ್ಠೆಗಾಗಿ, ಲೋಕಸಭೆ ಚುನಾವಣೆಯಾದರೆ ವಿಧಾನಸಭೆ ಸ್ಥಾನಕ್ಕೆ ರಾಜಿನಾಮೆ, ವಿಧಾನಸಭೆ ಚುನಾವಣೆಯಾಗರೆ ಲೋಕಸಭೆ ಚುನಾವಣೆಗಳಲ್ಲಿ ನಿಂತುಕೊಂಡು, ಪ್ರಜಾಪ್ರಭತ್ವ ವ್ಯವಸ್ಥೆಯ ಅಣಕವಾಡಿಸುತ್ತಾರೆ. ಈ ಕ್ರಮದಿಂದಾಗಿ ಇಂದು ಮತದಾರರ ಮೇಲೆ ಲೋಕಸಭೆ ಉಪಚುನಾವಣೆ ಅನಿವಾರ್ಯವಾಗಿರುವುದು ನಿಜಕ್ಕೂ ಖಂಡನೀಯ, ಮಾಜಿ ಸಂಸದ ಕುಮಾರಸ್ವಾಮಿ, ತಾವು ಸಂಸದರಾಗಿದ್ದಾಗ ಒಮ್ಮೆಯೂ ಕ್ಷೇತ್ರದ ಅಭಿವೃದ್ಧಿಗಾಗಲಿ, ಸಮಸ್ಯೆಗೆ ಸ್ಪಂದಿಸದೆ ಈಗ ಪುನಃ ತಮ್ಮ ಪತ್ನಿಯನ್ನೆ ಕಣಕ್ಕಿಳಿಸಿರುವುದು ನಿಜಕ್ಕೂ ಖೇದಕರ, ಜಾತ್ಯತೀತ ಪಕ್ಷವೆಂದು ಹೇಳಿಕೊಂಡು ಕೇವಲ ಜಾತಿ ಹೆಸರಲ್ಲೆ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಪಕ್ಷಕ್ಕೆ ಈ ಬಾರಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆಂದರು.
ಕುಣಿಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ವಕ್ತಾರ ಹೇರೂರು ಶಂಕರ್, ಮುಖಂಡರಾದ ರೆಹಮಾನ್ ಶರೀಫ್, ಮಾಗಡಿಪಾಳ್ಯ ಲಕ್ಷ್ಣಣ, ಗಿರೀಶ್, ರಂಗಸ್ವಾಮಿ, ಲಕ್ಷ್ಮಣ ಗೌಡ, ಬೆಟ್ಟಸ್ವಾಮಿ, ಪದ್ಮನಾಭ, ರಂಗನಾಥ ಇತರರು ಉಪಸ್ತಿತರಿದ್ದರು.