ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಗನ ಸಾವಿನ ಸುದ್ದಿ ಕೇಳಿದ ಕ್ಷಣವೇ ತಾಯಿ ಸಾವು

Rashmi Kasaragodu
Updated On : 7 Aug 2013, 1:03 am

ಕುಣಿಗಲ್: ಮಗನ ಸಾವಿನ ಸುದ್ದಿ ಕೇಳಿದ ಮರುಕ್ಷಣವೇ ತಾಯಿಯೂ ಮೃತ ಪಟ್ಟಿರುವ ದಾರುಣ ಘಟನೆ ಪಟ್ಟಣ ಕೋಟೆ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಪಟ್ಟಣದ ಕೋಟೆ ಪ್ರದೇಶದ ಮುಖ್ಯರಸ್ತೆಯಲ್ಲಿ ವಾಸವಾಗಿರುವ ಗಿರಿಜಾಶಂಕರ್ ಅಲಿಯಾಸ್ ಗಿರಿ(30) ಪ್ಲಂಬಿಂಗ್, ಎಲೆಕ್ಟ್ರಿಕಲ್ ವೈರಿಂಗ್ ಕೆಲಸ ಮಾಡುತ್ತಿದ್ದು, ಮಂಗಳವಾರ ಸಂಜೆ ಆರೂವರೆ ಗಂಟೆ ಸಮಯದಲ್ಲಿ ಮನೆಯಲ್ಲಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಜಾರಿ ಪಕ್ಕದಲ್ಲೆ ಇದ್ದ ತೊಟ್ಟಿಗೆ ಬಿದ್ದು ಪ್ರಜ್ಞಾಹೀನನಾದ. ಸ್ನಾನಕ್ಕೆಂದು ಹೋದ ಮಗ ಎಷ್ಟು ಹೊತ್ತಾದರೂ ಬಾರದಿದ್ದನ್ನು ಕಂಡ ತಾಯಿ ಪಾರ್ವತಮ್ಮ ಹೋಗಿ ನೋಡಲಾಗಿ ತೊಟ್ಟಿಯಲ್ಲಿ ಮಗ ಅಂಗಾತವಾಗಿ ಬಿದ್ದಿದ್ದ. ಕೂಡಲೆ ಕೂಗಿಕೊಂಡ ಮೇರೆಗೆ ನೆರೆಹೊರೆಯವರು ಅಗಮಿಸಿ, ಗಿರಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಗಿರಿ ಮೃತಪಟ್ಟ. ಇತ್ತ ಮಗನನ್ನು ಆಸ್ಪತ್ರೆಗೆ ಕರೆದೊಯ್ದ ಹಿನ್ನೆಲೆಯಲ್ಲಿ ಗಾಬರಿಗೊಂಡ ತಾಯಿ ರೋದಿಸ ತೊಡಗಿದಳು. ಆದರೆ, ಮಗ ಆಸ್ಪತ್ರೆಯಲ್ಲಿ ಮೃತಪಟ್ಟನೆಂಬ ವಿಷಯ ತಿಳಿದ ಕೂಡಲೆ ಪಾರ್ವತಮ್ಮ (70) ಸಹ ಮೃತಪಟ್ಟಳು. ಪುರಸಭೆ ಸದಸ್ಯರಾದ ಸತೀಶ್, ಚಂದ್ರಶೇಖರ್, ಭೇಟಿ ನೀಡಿ, ಸಂಬಂಧಿಕರೊಂದಿಗೆ ಸೇರಿ ತಾಯಿ ಮಗನ ಅಂತಿಮ ಸಂಸ್ಕಾರಕ್ಕೆ ಅಗತ್ಯ ಕ್ರಮ ಕೈಗೊಂಡರು.
ತೆಂಗು ಜತೆಗೆ ಅಂತರ ಬೆಳೆ ಬೆಳೆಯಲು ಸಲಹೆ  
ಹಾಸನ: ರೈತರು ಕೇವಲ ತೆಂಗು ಬೆಳೆಯ ಮೇಲೆ ಅವಲಂಬಿತರಾಗದೇ ಅದರ ಜೊತೆ ಅಂತರ ಬೆಳೆಗಳನ್ನು ಬೆಳೆದು ಆದಾಯ ಹೆಚ್ಚಿಸಿಕೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ನಟರಾಜ್ ಸಲಹೆ ನೀಡಿದ್ದಾರೆ. ಅವರು ಕಂದಲಿಯಲ್ಲಿ  ಏರ್ಪಡಿಸಿದ್ದ ಯುವ ರೈತರಿಗೆ ತೆಂಗಿನ ಮರ ಹತ್ತುವ ಮತ್ತು ಸಸ್ಯ ಸಂರಕ್ಷಣೆಯ ಬಗ್ಗೆ ಆರು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತೆಂಗಿನ ಮರದಿಂದ ಆಗುವ ಉಪಯೋಗ ಅನೇಕ. ತೆಂಗಿನ ಮರದಿಂದ ಆಹಾರ, ಪಾನೀಯ, ಇಂಧನಕ್ಕೆ ಸೌದೆ ವಸತಿಗೆ ಮತ್ತು ಅನೇಕ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುತ್ತದೆ ಎಂದು ವಿವರಿಸಿದರು.  ಕೇಂದ್ರದ ವಿಜ್ಞಾನಿ ಡಾ.ಆರ್. ವಿನಯ್ಕುಮಾರ್ ಶಿಬಿರಾರ್ಥಿಗಳು ತೆಂಗಿನ ಮರ ಹತ್ತುವ ಸಾಧನದ ಮೂಲಕ ಮರ ಹತ್ತುವುದನ್ನು ಕಲಿತು ಹಳ್ಳಿಗಳಲ್ಲಿ ಮರ ಹತ್ತುವವರು ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಉಪಕಸುಬಾಗಿ ತೆಗೆದುಕೊಳ್ಳಬಹುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement