ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ರಸ್ತೆ ತಡೆ
ಹುಳಿಯಾರು: ಸಮೀಪದ ಹಂದನಕೆರೆ ಹೋಬಳಿ ದೊಡ್ಡಎಣ್ಣೆಗೆರೆ ಸರ್ಕಾರಿ ಪದವಿಪೂರ್ವ
ಕಾಲೇಜಿಗೆ ಕೊಠಡಿ, ಶೌಚಾಲಯ, ಕುಡಿಯುವ ನೀರು ಹಾಗೂ ಗ್ರಂಥಾಲಯ ಸೇರಿದಂತೆ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಕಲ್ಫಿಸುವಂತೆ ಒತ್ತಾಯಿಸಿ ಕಾಲೇಜಿನ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ದೊಡ್ಡಣ್ಣೆಗೆರೆ ಗೇಟ್ನಲ್ಲಿ ಪ್ರತಿಭಟಿಸಿ ರಸ್ತೆ ತಡೆ ನಡೆಸಿದ ಘಟನೆ ಮಂಗಳವಾರ ಜರುಗಿತು.
ಕಾಲೇಜಿನಿಂದ ಪ್ರಾರಂಭಗೊಂಡ ವಿದ್ಯಾರ್ಥಿಗಳ ಪ್ರತಿಭಟನಾ ಮೆರೆವಣಿಗೆ ಊರಿನ ಪ್ರಮುಖ ರಸ್ತೆಗೆಳಲ್ಲಿ ಸಾಗಿ ದೊಡ್ಡಎಣ್ಣೆಗೆರೆ ಗೇಟ್ನಲ್ಲಿ ಸಭೆ ಸೇರಿ, ಮಾನವಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಹುಳಿಯಾರಿನ ಎಬಿವಿಪಿ ಘಟಕದ ಅಧ್ಯಕ್ಷ ನರೇಂದ್ರಬಾಬು ಮಾತನಾಡಿ ಈ ಕಾಲೇಜು ಆರಂಭಗೊಂಡು ಕೆಲ ವರ್ಷಗಳೇ ಕಳೆದಿದ್ದರೂ ಸಹ ಅವಶ್ಯಕವಾದ ಕೊಠಡಿಯಾಗಲಿ, ಶೌಚಾಲಯವಾಗಲಿ,ಪೀಠೋಪಕರಣಗಳಗಲಿ, ಗ್ರಂಥಾಲಯವಾಗಲಿ ಇಲ್ಲ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ
ತೊಡಕುಂಟಗುತ್ತಿದೆ. ಈ ಬಗ್ಗೆ ಅನೇಕ ಸಲ ಜನಪ್ರತಿನಿದಿಗಳಿಗೆ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರು ಎಚ್ಚೆತ್ತ ಅಧಿಕಾರಿಗಳು ಇತ್ತ ಗಮನ ಹರಿಸಿ, ಕಾಲೇಜಿನ ಸಮಸ್ಯೆ ಪರಿಹರಿಸಲು ಮುಂದಾಗಿ ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ವಿದ್ಯಾರ್ಥಿ ರಂಜಿತ ಮಾತನಾಡಿ, ಗ್ರಾಮಾಂತರ ಪ್ರದೇಶದ ಕಾಲೇಜು ಎಂಬ ತಾತ್ಸಾರದಿಂದ ಸರ್ಕಾರ ನಮ್ಮ ಕಾಲೇಜಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸುವಲ್ಲಿ ತಾರತಮ್ಯ ಮಾಡಿದೆ. ವಿದ್ಯಾರ್ಥಿನಿಯರು ಶೌಚಾಲಯವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ ಎಂದು ದೂರಿದರು. ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.
ಸ್ಥಳಕ್ಕಾಗಮಿಸಿದ ಕಂದಾಯ ತನಿಖಾಧಿಕಾರಿ ಪ್ರಸನ್ನಕುಮಾರ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಕೂಡಲೇ ಈ ಸಮಸ್ಯೆಗಳನ್ನು ಪರಿಸುವ ನಿಟ್ಟಿನಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿ, ಧರಣಿ ನಿರತ ವಿದ್ಯಾರ್ಥಿಗಳ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.
ಈ ಪ್ರತಿಭಟನೆಯಲ್ಲಿ ಎಬಿವಿಪಿ ಉಪಾಧ್ಯಕ್ಷ ಹೊನ್ನಪ್ಪ, ಪದಾಧಿಕಾರಿಗಳಾದ ದಯಾನಂದ ಮೂರ್ತಿ, ಮಹಂತೇಶ್, ಶ್ರೀಧರ್,ಮದನ್ಕುಮಾರ್, ಯಶವಂತ್, ಲೋಕೇಶ್, ರಂಜಿತ, ಸುಧಾ, ಶಶಿಕುಮಾರ್, ವಿನಯಕುಮಾರ್ ಸೇರಿದಂತೆ ಇತರರು ಪಾಲಗೊಂಡಿದ್ದರು.