ಸೂಲಗಿತ್ತಿ ನರಸಮ್ಮಗೆ ಪ್ರಸೂತಿ ವಿಶಾರದೆ ಪ್ರಶಸ್ತಿ ಪ್ರದಾನ
ಕ.ಪ್ರ.ವಾರ್ತೆ ತುಮಕೂರು ಆ. 6
ಇಲ್ಲಿನ ಸಂಸ್ಕಾರ ಭಾರತಿ ಕರ್ನಾಟಕ ಮತ್ತು ಗಮಕ ಭಾರತಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಗಡಿನಾಡರತ್ನ ಸೂಲಗಿತ್ತಿ ನರಸಮ್ಮನವರಿಗೆ ಪ್ರಸೂತಿ ವಿಶಾರದೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಅಭಿನಂದನಾ ನುಡಿಗಳನ್ನಾಡಿದ ವೆಂಕಟೇಶ್ ಜೋಯಿಸ್ ಅವರು ನರಸಮ್ಮ ಅವರು ಹೆಣ್ಣು ಮಕ್ಕಳಿಗೆ ಅವರ ಸಾವು-ಬದುಕಿನ ಹೋರಾಟದ ಪ್ರಮುಖ ಘಟ್ಟವಾದ ಹೆರಿಗೆ ಸಂದರ್ಭದಲ್ಲಿ ಸುಖ ಪ್ರಸವ ಮಾಡುವ ಮೂಲಕ ಎಲ್ಲಾ ತಾಯಂದಿರ ಕೃತಜ್ಞತೆಗೆ ಪಾತ್ರರಾಗಿದ್ದಾರೆ ಎಂದರು.
12ಜನ ಮಕ್ಕಳು 32 ಜನ ಮೊಮ್ಮಕ್ಕಳ ಅವಿಭಕ್ತ ಕುಟುಂಬದ ಒಡತಿಯಾಗಿ ಕುಟುಂಬ ನಿರ್ವಹಣೆಯೊಂದಿಗೆ ಸೇವಾಗುಣವನ್ನು ಮೈಗೂಡಿಸಿಕೊಂಡಿರುವ ಅವರ ಸಾಧನೆ ಅತ್ಯಂತ ಶ್ರೇಷ್ಠವಾದುದು ಎಂದರು.
ಪ್ರಸೂತಿ ಒಂದೇ ಅಲ್ಲದೇ ಕಣ್ಣಿನಲ್ಲಿ ಬಿದ್ದ ಕಸ ತೆಗೆಯುವುದು, ಗರ್ಭಿಣಿಯರಿಗೆ ಆರೋಗ್ಯದ ಬಗ್ಗೆ ಸಲಹೆ ನೀಡುವುದು ಶ್ಲಾಘನೀಯ. ತಮ್ಮ ಬಳಿಗೆ ಅನೇಕ ಪ್ರಸಿದ್ಧ ಸ್ತ್ರೀ ರೋಗ ತಜ್ಞರು ತಮ್ಮ ಸಲಹೆಗಳನ್ನು ಅಪೇಕ್ಷಿಸಿ ಬರುತ್ತಾರೆಂದರೆ ತಮ್ಮ ಪ್ರಾವೀಣ್ಯತೆ, ಸಾಮಾಜಿಕ ಕಳಕಳಿ ಹಾಗೂ ತಮ್ಮ ಮಾತೃ ಹೃದಯದ ಸೇವೆಗೆ ಸಾವಿರ ನಮನಗಳು ಎಂದರು.
ಇವಿಷ್ಟೆ ಅಲ್ಲದೇ ಸೋಬಾನೆ ಪದ ಹಾಡುವುದರಲ್ಲೂ ಅವರು ನಿಷ್ಣಾತರಾದ ಇವರು ಜಾನಪದ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ಎಲೆಮರೆಯ ಕಾಯಿಯಂತೆ ಸುದೀರ್ಘ 70 ವರ್ಷಗಳ ಕಾಲ ಪ್ರಸೂತಿ ಸೇವೆಯನ್ನು ಮಾಡಿರುವ ತಾಯಿ ಸೂಲಗಿತ್ತಿ ನರಸಮ್ಮನವರಿಗೆ ಸಂಸ್ಕಾರ ಭಾರತಿಯಿಂದ ಅಭಿನಂದಿಸಿ ಪ್ರಶಸ್ತಿ ನೀಡುತ್ತಿರುವುದು ಸಂಸ್ಕಾರವೇ ಸರಿ ಎಂದರು.
ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ಅನಂತರಾಮಯ್ಯ, ಗಮಕಿ ರೇಣುಕಾ ಪ್ರಸಾದ್, ತಹಸೀಲ್ದಾರ್ ಅನಂತರಾಮು, ಮಂಗಳೂರು ಚಂದ್ರಶೇಖರ ಶೆಟ್ಟಿ, ಶ್ರೀನಿವಾಸ ಶಾಸ್ತ್ರಿ ಮುಂತಾದವರು ಹಾಜರಿದ್ದರು.