ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸೌಲಭ್ಯಕ್ಕಾಗಿ ಬೀದಿಗಿಳಿದ ವಿದ್ಯಾರ್ಥಿಗಳು

Rashmi Kasaragodu
Updated On : 7 Aug 2013, 1:03 am

ಚಿಕ್ಕನಾಯಕನಹಳ್ಳಿ: ರಾಜಕೀಯ ಸಮಾರಂಭಗಳು  ಹಾಗೂ ರಸಮಂಜರಿ ಕಾರ್ಯಕ್ರಮಗಳನ್ನು ನಡೆಸಲು ಪುರುಸೊತ್ತಿರುವ ಶಾಸಕರಿಗೆ ತಮ್ಮ ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಬಗ್ಗೆ ಗಮನಹರಿಸಲು ಕಾಲಾವಕಾಶವಿಲ್ಲದಿರುವುದು ಇಲ್ಲಿನ ವಿದ್ಯಾರ್ಥಿಗಳ ದೌರ್ಭಾಗ್ಯ ಎಂದು ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಕಾಲೇಜಿನಲ್ಲಿರುವ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಪರಿಹರಿಸುವಂತೆ ಒತ್ತಾಯಿಸಿ ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು  ತರಗತಿಗಳನ್ನು ಬಹಿಷ್ಕರಿಸಿ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿದರು.
2-1-1973ರಲ್ಲಿ ರಾಜ್ಯದಲ್ಲಿ ಪ್ರಾರಂಭವಾದ ಸ್ವತಂತ್ರ ಪದವಿ ಪೂರ್ವ ಕಾಲೇಜೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಪ್ರಾರಂಭವಾದಾಗಿನಿಂದಲೂ  ಸೌಲಭ್ಯಗಳ ಕೊರತೆಯನ್ನು ನಿರಂತರವಾಗಿ ಅಂಟಿಕೊಂಡು ಬಂದಿದೆ. ಕಾಲೇಜಿನಲ್ಲಿ ಹಾಲಿ 765 ವಿದ್ಯಾರ್ಥಿಗಳಿದ್ದು, ಅದರಲ್ಲಿ 181 ವಿಜ್ಞಾನ, 298 ವಾಣಿಜ್ಯ, 287 ಕಲಾ ವಿಭಾಗದ ವಿದ್ಯಾರ್ಥಿಗಳಿದ್ದು, ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಿತ್ತು ತಿನ್ನುತ್ತಿದೆ. ಸರ್ವೆ ನಂಬರ್ 146ರಲ್ಲಿ ಪಟ್ಟಣದ ಬ್ರಹ್ಮಪುರಿ ಆಂಜನೇಯ ಸ್ವಾಮಿಯ 13-14 ಎಕರೆ ಜಾಗವನ್ನು ವಶಪಡಿಸಿಕೊಂಡು, ಅಂದಿನ ಕಾಲಕ್ಕೆ ಸ್ಥಿತಿವಂತ ಜವಳಿ ವ್ಯಾಪಾರಿ ಸಿ.ಕೆ.ನಾರಾಯಣಶೆಟ್ಟರ 50 ಸಾವಿರ ರು.ಗಳ ದಾನ ಮತ್ತು ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕಿನ ಷೇರುದಾರರು ತಮ್ಮ ಡಿವಿಡೆಂಡನ್ನು ದಾನಮಾಡುವ ಮೂಲಕ  ಸರ್ಕಾರದ  ಆದೇಶವನ್ನು ಮಾತ್ರ ಪಡೆದು ಕಾಲೇಜು ಪ್ರಾರಂಭವಾಯಿತು.
ಗಣಿತ ಉಪನ್ಯಾಸಕರಿಲ್ಲ: 3 ವರ್ಷಗಳಿಂದ ಗಣಿತ ವಿಷಯದ ಉಪನ್ಯಾಸಕರಿಲ್ಲದೆ ಸ್ಥಿತಿವಂತ ವಿದ್ಯಾರ್ಥಿಗಳು ಮನೆ ಪಾಠಕ್ಕೆ ಹೋಗುತ್ತಾರೆ. ಆದರೆ ಬಡವಿದ್ಯಾರ್ಥಿಗಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ ಮುಂತಾದ ಉಪನ್ಯಾಸಕರು ಸಹ ಇಲ್ಲ. ಇದಲ್ಲದೆ 4 ಜನ ಡಿ ದರ್ಜೆ ನೌಕರರು, ಲ್ಯಾಬ್ ಅಟೆಂಡರ್ ಹುದ್ದೆ, ಕಚೇರಿ ವಿಭಾಗದಲ್ಲಿ ಸೂಪರಿಂಡೆಂಟ್, ದ್ವಿತೀಯ ದರ್ಜೆ ಗುಮಾಸ್ತರ, ಗ್ರಂಥಪಾಲಕರ  ಹುದ್ದೆಗಳು  ಖಾಲಿಯಿವೆ.  ದೈಹಿಕ ಶಿಕ್ಷಕರ ಅಧೀಕ್ಷರು ಪ್ರಾರಂಭದಿಂದಲು  ಹುದ್ದೆಯನ್ನು ಒದಗಿಸಿಲ್ಲ. ಶೌಚಾಲಯ ವ್ಯವಸ್ಥೆಯಂತು ಹೇಳತೀರದಾಗಿದೆ. ಇದರ ಜೊತೆಗೆ ಗಾಯದ ಮೇಲೆ ಬರೆಯೆಳೆದಂತೆ ಕಾಲೇಜಿಗಿದ್ದ 13ಎಕರೆ 14 ಗುಂಟೆ ಜಾಗದಲ್ಲಿ ಈಗ ಉಳಿದಿರುವುದು ಕೇವಲ 6-10ಗುಂಟೆ ಮಾತ್ರ. ಆದ್ದರಿಂದ ಸರ್ಕಾರ ಕೂಡಲೇ ಇತ್ತ ಗಮನಹರಿಸಿ ಕಾಲೇಜಿನಲ್ಲಿರುವ ಮೂಲಭೂತ ಕೊರತೆಗಳನ್ನು ನಿವಾರಿಸುವುದರ ಜೊತೆಗೆ ಕಾಲೇಜಿನ ಜಮೀನನ್ನು ಅಳತೆ ಮಾಡಿಸಿ ಒತ್ತುವರಿದಾರರ ವಿರುದ್ಧ ಕ್ರಮಕೈಗೊಳ್ಳ ಬೇಕೆಂದು ಮನವಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.  ಪ್ರತಿಭಟನೆಯನ್ನುದ್ದೇಶಿಸಿ ವಿದ್ಯಾರ್ಥಿಗಳಾದ  ಗೌತಮ್, ಗೀತಾ,ಬನಶಂಕರಿ, ಗುಪ್ತ, ಕಾವ್ಯ, ಸಿ.ಎಂ.ಅಶ್ವಿನಿ, ಮುಂತಾದವರು ಮಾತನಾಡಿದರು.  
ಪ್ರತಿಭಟನೆಯ ನೇತೃತ್ವವನ್ನು ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್,ಎಬಿವಿಪಿ ತಾಲೂಕು ಸಂಚಾಲಕ ಚೇತನ್ ಪ್ರಸಾದ್, ಮೈಕ್ ಸಿದ್ದರಾಮಣ್ಣ,ಮುಂತಾದವರು ವಹಿಸಿದ್ದರು.                                                   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement