ಹೆತ್ತ ಮಗನ ಸಾವಿನ ಸುದ್ದಿ ಕೇಳಿದ ಮರುಕ್ಷಣವೇ ತಾಯಿ ಕೂಡ ಸಾವು
ಕುಣಿಗಲ್: ಮಗನ ಸಾವಿನ ಸುದ್ದಿ ಕೇಳಿದ ಮರುಕ್ಷಣವೇ ತಾಯಿಯೂ ಮೃತಪಟ್ಟಿರುವ ದಾರುಣ ಘಟನೆ ಪಟ್ಟಣ ಕೋಟೆ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ. ಪಟ್ಟಣದ ಕೋಟೆ ಪ್ರದೇಶದ ಮುಖ್ಯರಸ್ತೆಯಲ್ಲಿ ವಾಸವಾಗಿರುವ ಗಿರಿಜಾಶಂಕರ್ ಅಲಿಯಾಸ್ ಗಿರಿ(30) ಪ್ಲಂಬಿಂಗ್, ಎಲೆಕ್ಟ್ರಿಕಲ್ ವೈರಿಂಗ್ ಕೆಲಸ ಮಾಡುತ್ತಿದ್ದು, ಮಂಗಳವಾರ ಸಂಜೆ ಆರೂವರೆ ಗಂಟೆ ಸಮಯದಲ್ಲಿ ಮನೆಯಲ್ಲಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಜಾರಿ ಪಕ್ಕದಲ್ಲೆ ಇದ್ದ ತೊಟ್ಟಿಗೆ ಬಿದ್ದು ಪ್ರಜ್ಞಾಹೀನನಾಗಿದ್ದ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಗಿರಿ ಮೃತಪಟ್ಟ. ಇತ್ತ ಮಗನನ್ನು ಆಸ್ಪತ್ರೆಗೆ ಕರೆದೊಯ್ದ ಹಿನ್ನೆಲೆಯಲ್ಲಿ ಗಾಬರಿಗೊಂಡ ತಾಯಿ ರೋದಿಸ ತೊಡಗಿದಳು. ಆದರೆ, ಮಗ ಆಸ್ಪತ್ರೆಯಲ್ಲಿ ಮೃತಪಟ್ಟನೆಂಬ ವಿಷಯ ತಿಳಿದ ಕೂಡಲೆ ಪಾರ್ವತಮ್ಮ (70) ಸಹ ಮೃತಪಟ್ಟಳು. ಪುರಸಭೆ ಸದಸ್ಯರಾದ ಸತೀಶ್, ಚಂದ್ರಶೇಖರ್, ಭೇಟಿ ನೀಡಿ, ಸಂಬಂಧಿಕರೊಂದಿಗೆ ಸೇರಿ ಅಂತಿಮ ಸಂಸ್ಕಾರಕ್ಕೆ ಅಗತ್ಯ ಕ್ರಮ ಕೈಗೊಂಡರು.